1
ದಾರಿ ಕವಲಾಗಿದ್ದಕ್ಕೆ ಬೇಸರವೇನೂ ಇಲ್ಲ
ಭೂಮಿತತ್ವ ತಪ್ಪಿರಬೇಕು; ನಾವು ಮತ್ತೆಂದೂ ಸಂಧಿಸಲಿಲ್ಲ
2
ಒಂದೇ ಒಂದು ಕನಸು ಬಿತ್ತು
ತಾನಾಗಿಯೇ ಹೊಸ ಬಾಗಿಲೊಂದು ತೆರೆದುಕೊಂಡಿತು
3
ಹಕ್ಕಿ ಗೂಡು ಕಟ್ಟಿತು; ನಾನು ಮನೆಯನ್ನು
ನಾನು ಇದ್ದಲ್ಲೇ ಉಳಿದೆ ; ಹಕ್ಕಿಗಳು ಹಾಗಲ್ಲ
4
ತಲೆದೂಗಿಸಲು ಎಷ್ಟು ಪದಗಳಿರಬೇಕು ಹಾಡಿನಲ್ಲಿ?
ಪದಗಳಿಲ್ಲದೆ ಹಾಡುವ ಹಕ್ಕಿ ಹುಕಿ ಬಂದಾಗ ರಾಗ ತೆಗೆಯುತ್ತದೆ
5
ಗೋಡೆ ಕಟ್ಟಿಕೊಳ್ಳದವರ ಮೇಲೆ ಪ್ರೀತಿ ಹುಟ್ಟಿತು
ಈ ಹೊತ್ತು ಈ ಊರಿನಲ್ಲಿ ಇಷ್ಟೇ ಇನ್ನೇನೂ ಇಲ್ಲ
6
ಪ್ರೀತಿಯ ಶ್ರೇಷ್ಠ ಆಯುಧವೆಂದರೆ
ಹರಸಾಹಸವಲ್ಲ; ಶರಣಾಗುವುದು
7
ಆತ್ಮವಿಶ್ವಾಸವೆಂದರೆ ಹಕ್ಕಿಯದು
ಯಾವ ವಿಮರ್ಶೆಗೂ ಹಾಡು ನಿಲ್ಲಿಸುವುದಿಲ್ಲ
8
ಬದುಕು ನಿಧಾನ ಪ್ರೀತಿಸುವುದು ಹೇಗೆಂಬುದು ಕಲಿಸಿತು
ಅಂದಿನಿಂದ ವೃಥಾ ಶಬ್ದ ಖರ್ಚು ಮಾಡುವುದು ನಿಂತಿತು
9
ತುಂಬ ದಣಿಯುವಂತೆ ನಡೆಸಿದ್ದು ಬದುಕು
ಎಷ್ಟು ಸರಳ ಸಾವು ಹಾಗೆಂದೂ ಮಾಡಲಿಲ್ಲ
10
ನಾನೇ ಹಚ್ಚಿಟ್ಟ ಹಣತೆಯನ್ನು ಆರಿಸಿದೆ
ಹತ್ತಾರು ಪತಂಗಗಳು ಬದುಕಿ ಬೆಳಕು ಕಂಡವು
11
ಎದುರಿಗಿರುವ ಪ್ರಾಣಿಪಕ್ಷಿ ಕ್ರಿಮಿಕೀಟ ಒಂದೇ ಆಗಿಕಂಡವು
ಎಲ್ಲಿ ತಪ್ಪಾಯಿತೋ ಮನುಷ್ಯನನ್ನು ನೋಡಿದೆ ಹತ್ತಾರು ಜನ ಕಂಡರು
-ಬಸೂ, ಧಾರವಾಡ
—–