……….ಗೆ
ಮೋಡಗಳ ಮೇಲೊಂದು
ಮನೆಯ ಮಾಡಬೇಕಿದೆ
ಮಳೆ ಹನಿಗಳಿಂದಲೇ ನಮಗಾಗಿ ಒಂದು
ಚಂದದ ಗೂಡು ಕಟ್ಟಿಕೊಳ್ಳಬೇಕಿದೆ
ನೀನು ಜೊತೆಗಿರೆ……………
ಕಾಮನಬಿಲ್ಲಿನ ಮೇಲೆ
ಜಾರುವಾಟ ಆಡಬೇಕಿದೆ
ಅದರ ಬಣ್ಣಗಳಿಂದಲೇ
ಒಂದು ಮಾಲೆಯ ಮಾಡಿ
ನಿನ್ನನಲಂಕರಿಸಬೇಕಿದೆ
ನೀನು ಜೊತೆಗಿರೆ……………
ಧೂಮಕೇತುವ ಹಿಡಿದು
ಸುರುಳಿ ಸುತ್ತಬೇಕಿದೆ
ಅದರ ಮೇಲೊಂದು ಚಿಕ್ಕೆಯನಿರಿಸಿ
ನಿನ್ನ ಬೆರಳಿಗೆ ತೊಡಿಸಬೇಕಿದೆ
ನೀನು ಜೊತೆಗಿರೆ…………
ಸೂರ್ಯನ ಮೇಲೊಂದು
ಹೂತೋಟವ ಮಾಡಬೇಕಿದೆ
ಅದರೊಳಗೆ ತಣ್ಣನೆಯ
ಬೆಂಕಿಯ ಹೂಗಳನರಳಿಸಿ
ನಿನಗೆ ಮುಡಿಸಬೇಕಿದೆ
ನೀನು ಜೊತೆಗಿರೆ…………..
ನಭೋ ಮಂಡಲದಾಚೆ
ಪಯಣ ಹೋಗಬೇಕಿದೆ
ಅಲ್ಲೊಂದಿಷ್ಟು ವಿಹರಿಸಿ
ಮತ್ತೆ ನಮ್ಮ ಮಳೆಹನಿಗಳ
ಗೂಡಿಗೆ ಮರಳಬೇಕಿದೆ
ತಣ್ಣನೆಯ ಹನಿಗಳ
ಜೋಕಾಲಿಯ ಮೇಲೆ
ನಿನ್ನ ಕೂರಿಸಿ ತೂಗಿ
ತಂಪೊಲವಿನ ರಾಗ ಹಾಡಬೇಕಿದೆ
ನೀನು ಜೊತೆಗಿರೆ…………………..
-ಸಿದ್ಧರಾಮ ಕೂಡ್ಲಿಗಿ