ಬಳ್ಳಾರಿ, ಜು.20 :ದೇಶದಾದ್ಯಂತ 40 ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ(ಎಫ್ ಪಿ ಎ ಐ) ತನ್ನ 75 ನೇ ವರ್ಷದ ಸಂಸ್ಥಾಪನಾ ದಿನಾಚರಣೆ (ಅಮೃತ ಮಹೋತ್ಸವ) ಅಂಗವಾಗಿ ಜು. 23 ರಿಂದ 31 ರವರೆಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಉಚಿತ ಗರ್ಭಕಂಠದ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದೆ ಎಂದು ಎಫ್ ಪಿ ಎ ಐ ಬಳ್ಳಾರಿ ಶಾಖೆಯ ಅಧ್ಯಕ್ಷ ಟಿ.ಜಿ.ವಿಠ್ಠಲ್ ಅವರು ತಿಳಿಸಿದರು. ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಹ್ಯೂಮನ್ ಪ್ಯಾಪಿಲೋಮ ವೈರಸ್ ನಿಂದ ಗರ್ಭಕಂಠದ ಕ್ಯಾನ್ಸರ್ ಅತಿ ವೇಗವಾಗಿ ಹರಡುತ್ತಿರುವುದರಿಂದ ಪ್ರತಿವರ್ಷ ಭಾರತದಲ್ಲಿ 1,23,000 ಮಹಿಳೆಯರಿಗೆ ಗರ್ಭಕಂಠದ ಕ್ಯಾನ್ಸರ್ ಹರಡುತ್ತಿದೆ. ಇದರಲ್ಲಿ 77% ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ. ಅಂದರೆ ಭಾರತದಲ್ಲಿ ಪ್ರತಿ 8 ನಿಮಿಷಕ್ಕೆ ಒಬ್ಬ ಮಹಿಳೆ ಗರ್ಭಕಂಠದ ಕ್ಯಾನ್ಸರ್ ನಿಂದ ಸಾವನ್ನಪ್ಪುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಗರ್ಭಕಂಠದ ಕ್ಯಾನ್ಸರ್ ತಪಾಸಣೆಯು ಒಂದು ವಾರಗಳ ಕಾಲ ಉಚಿತವಾಗಿದ್ದು ತಪಾಸಣೆ ಮಾಡಿಸಿಕೊಳ್ಳುವವರು 8550017521 ನಂಬರ್ ಗೆ ಕರೆ ಮಾಡಿ ನೋಂದಣಿ ಮಾಡಿಕೊಳ್ಳಬಹುದು ಅಥವಾ ಸಂಸ್ಥೆಗೆ ಭೇಟಿ ನೀಡಿ ಖುದ್ದಾಗಿ ನೋಂದಣಿ ಮಾಡಿಕೊಳ್ಳಬಹುದು ಎಂದು ತಿಳಿಸುತ್ತಾ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಈ ತಪಾಸಣೆಗೆ ಒಳಪಡಬೇಕೆಂದು ಹೇಳಿದರು. ಜೊತೆಗೆ HPV ವ್ಯಾಕ್ಸಿನ್ ಅನ್ನು ಫ್ಯಾಮಿಲಿ ಪ್ಲಾನಿಂಗ್ ಸಂಸ್ಥೆಯು ಕೇವಲ 1500 ರೂಪಾಯಿಗೆ ನೀಡುವ ವ್ಯವಸ್ಥೆಯನ್ನು ಮಾಡಿದೆ ಎಂದು ಹೇಳಿದರು.
ಅಮೃತ ಮಹೋತ್ಸವದ ಅಂಗವಾಗಿ ಜು.23ರಂದು ಮಂಗಳವಾರ ವರ್ಷಪೂರ್ತಿ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿದ್ದು, ಬಳ್ಳಾರಿಯ ಜಿಲ್ಲಾಧಿಕಾರಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಚಾಲನೆ ನೀಡುವರು. ಹಾಗೂ ಉಚಿತ ಗರ್ಭಕಂಠದ ಕ್ಯಾನ್ಸರ್ ಶಿಬಿರದ ಚಾಲನೆಯನ್ನು ಬಳ್ಳಾರಿಯ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ.ವಿ.ಜೆ.ರವರು ನೇರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಳ್ಳಾರಿ ಜಿಲ್ಲಾ ಆರೋಗ್ಯಧಿಕಾರಿ ಡಾ.ವೈ ರಮೇಶ್ ಬಾಬುರ ಅವರು ಉಪಸ್ಥಿತರಿರುವರು ಎಂದು ವಿಠಲ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್ ಆಫ್ ಇಂಡಿಯಾದ ರಾಷ್ಟ್ರೀಯ ಉಪಾಧ್ಯಕ್ಷ ಎಸ್.ವಿಜಯ ಸಿಂಹ, ಉಪಾಧ್ಯಕ್ಷ ಡಾ.ಚಂದನ, ಆರ್ಥಿಕ ಸಲಹೆಗಾರರಾದ ಭಾಗ್ಯ, ಸದಸ್ಯರಾದ ವಿಷ್ಣು ಹಾಗೂ ಅಹಿರಾಜ್, ಶಾಖಾ ವ್ಯವಸ್ಥಾಪಕಿ ಎಸ್.ವಿಜಯಲಕ್ಷ್ಮಿ ಉಪಸ್ಥಿತರಿದ್ದರು.