ಕೇಳು ನನ್ನ ಕವಿತೆ
ಹೇಗಿದೆ ಎಂದು ಕೇಳಿ ಹೇಳು
ಕಷ್ಟಪಟ್ಟು ಯೋಚಿಸಿ ಬರೆದ ಕವಿತೆ
ಬೆನ್ನು ತಟ್ಟಿದವರೆಷ್ಟೋ ಜನ ನಾ ಬರೆದ ಕವಿತೆಗೆ
ಬಂದ ಪ್ರಶಸ್ತಿಗಳೆಷ್ಟೋ ಬಹುಮಾನ ಹೊಗಳಿಕೆಗಳೆಷ್ಟೋ ನೀನರಿಯೆ
ಒಮ್ಮೆ ಕೇಳು ಕಿವಿಗೊಟ್ಟು
ಮನಸಿಟ್ಟು ನಾ ಬರೆದ ಕವಿತೆಯ
ಬಿಸಾಡು ಸ್ವಲ್ಪ ಸಮಯ ಕೈಯಲ್ಲಿರುವ ಸಲಿಕೆ ಕಬ್ಬಿಣ ಪುಟ್ಟಿಯ
ಮಣ್ಣು ಹೋರುವುದು ಇದ್ದೇ ಇದೆ
ನೋಡು ಹೇಗೆ ವರ್ಣಿಸಿರುವೆ ನಿನ್ನ ಬೆವರ ಹನಿಗಳ
ಹೇಗೆ ಚಿತ್ರಿಸಿರುವೆ ನಿನ್ನ ಕರುಣಾಜನಕ ಸ್ಥಿತಿಯ..
ಅರಿವಾಗಬೇಕು ಜಗತ್ತಿಗೆ ನಿನ್ನ ದಯನೀಯ ಸ್ಥಿತಿ
ಬಾ ಇಲ್ಲಿ,ಸ್ವಲ್ಪ ಕುಳಿತುಕೋ
ಕುಳಿತು ಆಲಿಸು
ತದೇಕಚಿತ್ತ ಇರಲಿ ಆಲಿಸುವಾಗ..
ಮತ್ತೆ ನಾ ತೆರಳಬೇಕು ಇಲ್ಲಿಂದ
ಮತ್ತೆ ಮತ್ತೆ ಓದಿ ಹೇಳಬೇಕು ಈ ಕವಿತೆಯ ಹತ್ತಾರು ಜನಗಳಿಗೆ
ಬೇಗ ಬಾ,
ಬಂದು ಇಲ್ಲಿ ಕೂಡು
ಕೇಳೆನ್ನ ಕವಿತೆಯ
ಎಷ್ಟೊಂದು ಅರ್ಥವಿದೆ ಪ್ರತಿ ಪದದಲ್ಲೂ
ಓದಲೇನು ಶುರುಮಾಡಲೇನು?
ಕವಿ ಒತ್ತಾಯಿಸಿದ
ಹಸಿವೆಗಾಗಿ ಆಳಾದವ ಏನು ಮಾತನಾಡಿಯಾನು
ದಿಟ್ಟಿಸಿ ನೋಡಿದ ಕವಿಯನ್ನು
ಮೇಲೆ ಸುಡುವ ಸೂರ್ಯ
ಒಳಗೆ ಕಿತ್ತು ತಿನ್ನುವ ಹಸಿವು
ದೇಹಕ್ಕಂಟಿದ ನೂರೊಂದು ವ್ಯಾಧಿ..
ಕವಿಯ ದಿಟ್ಟಿಸಿ ಕೇಳಿದ
ನಿನ್ನ ಕವಿತೆ ನನ್ನ ಹಸಿವ ನೀಗಿಸಬಲ್ಲುದೇನು
ದೇಹಕ್ಕಂಟಿದ ವ್ಯಾಧಿಯ ಹೊಡೆದೋಡಿಸಬಲ್ಲುದೇನು
ನನ್ನ ಬೆವರ ಹನಿಗೆ ಕೂಲಿ ಕೊಡಬಲ್ಲುದೇನು..
ಹರಿದ ಅರಿವೆಗಳ ಹೊಚ್ಚ ಹೊಸದು ಮಾಡಬಲ್ಲುದೇನು
ನನ್ನ ಜೋಪಡಿಯ ಮಣ್ಣಿನ ಮನೆಯನ್ನಾದರೂ ಮಾಡಿ ಕೊಡುವುದೇನು?
ಕವಿ ನಿರುತ್ತರನಾಗಿ ತಲೆಯ ಮೇಲೆ ಕೈ ಹೊತ್ತು ಕುಳಿತ
ಆಳಾದವ ನಕ್ಕ
ನನ್ನ ಕವಿತೆ ಅಕ್ಷರದ್ದಲ್ಲ
ನನ್ನದು ಕಾಯಕದ ಕವಿತೆ
ಮಣ್ಣಿನೊಡನೆ ಸದಾ ನನ್ನ ನಂಟು
ಮಣ್ಣು ಬೆವರುಗಳೇ ನನ್ನ ಕವಿತೆ
ಮಣ್ಣು ಬೆವರುಗಳೇ ನನ್ನ ಅನ್ನ
ಕವಿತೆ ಬರೆದು ಸಾಧಿಸುವೆ ಏನನ್ನು?
ಜಾಣ ನೀನೆಂಬರು ಜನ
ನಿನ್ನಂತೆ ನಾನಲ್ಲ ಸೋಮಾರಿ ಮೈಗಳ್ಳ ನೀನು..
ಬಾಗು ನನ್ನಂತೆ ಭೂಮಿಗೆ
ನೆಡು ಗಿಡಗಳ
ವೃಕ್ಷಗಳ ಬೆಳೆಸು
ಬಳ್ಳಿಯಲ್ಲಿ ಹೂಗಳರಳಿಸು
ಹೂ ಗಳ ಪರಿಮಳವ ಆಘ್ರಾಣಿಸು
ಪ್ರಕೃತಿಯೇ ಸುಂದರ ಕವಿತೆ
ಬೆವರ ಹನಿಗಳು,ಸುಡುವ ಸೂರ್ಯ ಲೆಕ್ಕಕ್ಕಿಲ್ಲ
ಪ್ರಕೃತಿಯ ನಗುವಿನ ಮುಂದೆ
ಅನ್ನವ ಜಗಕೆ ನೀಡುವವನು ನಾನು
ನನಗೇಕೆ ಕವಿತೆ
ಕಾಯಕವೇ ನನ್ನ ಕವಿತೆ
ತೆರಳು ಬಂದ ಹಾದಿಗೆ
ನಾನು ಎಲೆ ಮರೆಯ ಕಾಯಿ
ಸಿಕ್ಕೀತೇನು ನನ್ನಂತಹ ತೃಪ್ತಿ ನಿನಗೆ
ಸುಮ್ಮನೆ ತೆರಳು
ಹೊಗಳಿಕೆ ಬೇಕು ನಿನಗೆ
ಬುದ್ಧಿವಂತ ನೀನು ಅನ್ನಬೇಕು ಜನರು
ಹೊರಡಾಚೆ ತೊಲಗಾಚೆ..
ನನಗೆ ಕಾಯಕವೇ ಕವಿತೆ
-ಮಹಿಮ, ಬಳ್ಳಾರಿ
—–