ಅನುದಿನ ಕವನ-೧೩೦೨, ಹಿರಿಯ ಕವಯಿತ್ರಿ:ಸವಿತಾ ನಾಗಭೂಷಣ, ಶಿವಮೊಗ್ಗ, ಕವನದ ಶೀರ್ಷಿಕೆ: ಹೊಳೆ‌ ಮಗಳು, ಹೊಳೆ ಚಿತ್ರ: ಶೇಖರ್ ಗೌಳೇರ್.

ಹೊಳೆ ಮಗಳು

ಅವಳು ಹಳ್ಳ
ಇವಳು ಹೊಳೆ
ಹಳ್ಳದ ಬಳ್ಳಿಯಲಿ
ಹರಿದು ಬಂದವಳು
ಹೊಳೆ ಮಗಳು

ತಾಯಿ-
ಹೊಳೆ ಮಗಳ ಹುಬ್ಬನು ತೀಡುವಳು
ಸುಳಿ ಮುಂಗುರುಳ ಬಾಚುವಳು
ದಿಟ್ಟಿಯ ಬೊಟ್ಟಿಟ್ಟು
ಅಕ್ಕರೆಯ ಮುತ್ತಿಟ್ಟು
ಮುನ್ನಡೆಸುವಳು….

ಇದು ಬೆಟ್ಟ ಇದು ಗಾಳಿ
ಇದು ಹೂವು ಇದು ಎಲೆ
ಎಂದು ಮಗಳಿಗೆ
ಪರಿಚಯಿಸುವಳು

ಮಗಳು-
ಕಲಿಯುವಳು
ಗಿಡ ಮರಗಳ ಅಡಿಯಲಿ ಬಾಗಿ
ಕಣಿವೆ ಕೊರಕಲು ಬಂಡೆ
ಹಾದಿಯಲಿ ಬಳುಕಿ ಸಾಗುವಳು

ಅವ್ವನಿಗೆ ತೋರುವಳು
ಸಂಭ್ರಮಿಸಿ ಹೇಳುವಳು
ನಕ್ಷತ್ರ ಗಣವಿರುವುದು
ನನ್ನೊಳಗೆ
ಚಂದಿರನಿರುವನು ತಳಗೆ

ತಾಯಿ ನಸುನಕ್ಕು-
ಸಣ್ಣನೆಯ ದನಿಯವಳೆ
ನುಣ್ಣನೆಯ ನಡೆಯವಳೆ
ನನ್ನ ಕರುಳಿನ ಕುಡಿಯೆ
ನನ್ನ ಆಶೆಯ ಕಿಡಿಯೆ
ಎಂದು ಮಗಳ ಮುದ್ದಾಡುವಳು

ತಾಯಿ ಎಚ್ಚರಿಸುವಳು:
ಚಿಣ್ಣರನು ಮುಳುಗಿಸದಿರು
ಮೀನುಗಳ ಒಣಗಿಸದಿರು
ಕಲ್ಲುಗಳ ಮಿದುಗೊಳಿಸಿ
ಸಹನೆಯಲಿ ನೀರುಣಿಸಿ
ಹರಿವ ಹಾದಿಯಲ್ಲೆಲ್ಲ
ಜೀವ ದೀಪವನುರಿಸು

ವಿಷಕಂಠನನುಸರಿಸಿ
ಕೊಳೆ ಕಳಂಕವ ಧರಿಸಿ
ಕಾಳಿಯಾವೇಶವ ತಾಳಿ
ಕೇಡಿನೆದೆಗೂಡ ಸೆಳೆದು
ಮಡುವಿನಲಿ ಮುಳುಗಿಸು

ಸೂರ್ಯನ ಕರುಣೆ
ನೆಲದ ಋಣ
ತಾಯ ಹರಕೆ
ಕೊನೆವರೆಗೆ ಕಾಯುವುದು

ತಾಯಿ
ನಿಂತಲ್ಲೆ ನಿಲ್ಲುವಳು
ತಪಸ್ವಿನಿ
‘ತಾವರೆ’ ಈಗವಳು
ಹಳ್ಳದ ಬಳ್ಳಿಯನು ಕಡಿದು
ಕಣ್ಣೀರ ತಡೆ ತಡೆದು
ಮುಂದೆ ಸಾಗುವಳು
ಹಿಂದೆ ನೋಡುವಳು
ಹೊಳೆ ಮಗಳು……


-ಸವಿತಾ ನಾಗಭೂಷಣ, ಶಿವಮೊಗ್ಗ