ಈ ನೆಲದ ಬಹುತ್ವವನ್ನು ಕಾಪಾಡುವುದೇ ಪತ್ರಿಕೋದ್ಯಮದ ಹೊಣೆಗಾರಿಕೆ -ಕೆ.ವಿ.ಪ್ರಭಾಕರ್

ವಿಜಯಪುರ ಜು 28: ಈ ನೆಲದ ಬಹುತ್ವವನ್ನು ಕಾಪಾಡುವುದೇ ಪತ್ರಿಕೋದ್ಯಮದ ಹೊಣೆಗಾರಿಕೆ ಆಗಬೇಕಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ನುಡಿದರು.
ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ವಿಜಯಪುರ ಬಹು ಸಂಸ್ಕೃತಿ ಮತ್ತು ಬಹು ಭಾಷೆಗಳ, ಹಲವು ಸಂಸ್ಕಾರಗಳನ್ನು ಏಕ ಕಾಲಕ್ಕೆ ಆಚರಿಸುವ ಜಿಲ್ಲೆ. ಈ ಬಹುತ್ವವೇ ನಮ್ಮ ನಾಡಿನ ಹೆಮ್ಮೆ. ಈ ಬಹುತ್ವವನ್ನು ಕಾಪಾಡುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದರು.
ಈ ವೇದಿಕೆಯ ಮೇಲೆ, ಈ ವೇದಿಕೆಯ ಮುಂಭಾಗದಲ್ಲಿ ಹಲವು ಸಂಸ್ಕೃತಿ ಮತ್ತು ಹಲವು ಭಾಷಿಕರು ನೆರೆದಿದ್ದೇವೆ. ಇದು ಈ ಜಿಲ್ಲೆಯ ಬಹುತ್ವದ ಸಂಕೇತ ಕೂಡ ಹೌದು.
ಇಲ್ಲಿ, ನನ್ನ ಬಲಗಡೆ ಬುದ್ದ, ಬಸವ ಮತ್ತು ಅಂಬೇಡ್ಕರ್ ಅವರ ಭಾವ ಚಿತ್ರಗಳನ್ನು ಅಳವಡಿದ್ದಾರೆ.
ಬುದ್ದನಿಂದ ಹಿಡಿದು ಅಂಬೇಡ್ಕರ್ ಅವರ ವರೆಗೂ ಏನೇನು ಹೇಳಿದ್ದಾರೋ, ಯಾವುದಕ್ಕಾಗಿ ಶ್ರಮಿಸಿದ್ದಾರೋ ಅದನ್ನು ಕಾಪಾಡಿಕೊಳ್ಳುವುದೇ ಪತ್ರಕರ್ತರ ಜವಾಬ್ದಾರಿ ಮತ್ತು ಪತ್ರಿಕೋದ್ಯಮದ ಹೊಣೆಗಾರಿಕೆ ಆಗಿದೆ.
ನಮ್ಮ ಸಂವಿಧಾನದಲ್ಲಿ ಪತ್ರಕರ್ತರಿಗೆ ಪ್ರತ್ಯೇಕ ಹಕ್ಕು, ಅಧಿಕಾರಗಳನ್ನೇನೂ ನೀಡಿಲ್ಲ. ಸಂವಿಧಾನ ನೀಡಿರುವ ಅಭಿವ್ಯಕ್ತಿ‌ ಸ್ವಾತಂತ್ರ್ಯವೇ ಪತ್ರಿಕಾ ಸ್ವಾತಂತ್ರ್ಯವೂ ಆಗಿದೆ. ಈ ಅಭಿವ್ಯಕ್ತ ಸ್ವಾತಂತ್ರ್ಯದ ದುರುಪಯೋಗ ಆದಾಗ ಎಂತೆಂಥಾ ಅನಾಹುತಗಳು ಆಗುತ್ತವೆ ಎನ್ನುವುದನ್ನು ಈಗಾಗಲೇ ಈ ಸಮಾಜ ಕಂಡಿದೆ ಎಂದು ಉದಾಹರಣೆಗಳ ಸಮೇತ ವಿವರಿಸಿದರು.

ಸಂವಿಧಾನದ ರಕ್ಷಣೆಯಿಂದ ಮಾತ್ರ ಪತ್ರಿಕಾ ಸ್ವಾತಂತ್ರ್ಯದ ರಕ್ಷಣೆ ಸಾಧ್ಯ. ಜನರ ನಿರೀಕ್ಷೆ ಮತ್ತು ಸಮಸ್ಯೆಗಳನ್ನು ಅರಿಯಲು ಸರ್ಕಾರಕ್ಕಾಗಲಿ, ವಿರೋಧ ಪಕ್ಷಕ್ಕಾಗಲಿ ಇರುವ ಬಹುಮುಖ್ಯ ಸಾಧನ ಮಾಧ್ಯಮ. ಮೊದಲೆಲ್ಲಾ ಜನರ ನಿರೀಕ್ಷೆಗಳನ್ಮು ಮಾಧ್ಯಮಗಳು ಸರ್ಕಾರದ ಗಮನಕ್ಕೆ ತರುತ್ತಿದ್ದವು. ಈಗ ಪರಿಸ್ಥಿತಿ ಬದಲಾಗಿದೆ. ಕಾರ್ಪೋರೇಟ್ ಶ್ರೀಮಂತರ ವೈಯುಕ್ತಿಕ ಹಿತಾಸಕ್ತಿಗಳೇ ಜನರ ಸಮಸ್ಯೆಗಳು ಎನ್ನುವಂತೆ ಬಿಂಬಿಸಲಾಗುತ್ತಿದೆ.
ಕಾರ್ಪೋರೇಟ್ ಸಂಸ್ಥೆಗಳು ಮಾಧ್ಯಮ ಲೋಕವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡ ಬಳಿಕ ಮನರಂಜನೆ ಮತ್ತು ಸುದ್ದಿಗಳ ಆಧ್ಯತೆ ಎರಡೂ ಬದಲಾಗಿವೆ ಎಂದರು.
ಕಾರ್ಪೋರೇಟ್ ಗಳ ಶ್ರೀಮಂತಿಕೆಯ ವಿಜೃಂಭಣೆ ಮತ್ತು ಸೆಲೆಬ್ರಿಟಿಗಳ ಜೀವನ ವಿಕೃತಿಗಳ ವಿಜೃಂಭಣೆಯೇ ಪತ್ರಿಕೋದ್ಯಮಕ್ಕೆ ಆಧ್ಯತೆ ಆಗುತ್ತಿರುವುದು ನಾಚಿಕೆಗೇಡು ಅಲ್ಲವೇ ಎಂದು ಪ್ರಶ್ನಿಸಿದರು.

ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು. ಫ.ಗು.ಹಳಕಟ್ಟಿಯವರ ಕುರಿತು ವಿಶೇಷ ಉಪನ್ಯಾಸ ನೀಡಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ.ಪಾಟೀಲ್, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ಜಿಲ್ಲಾ ಮತ್ತು ತಾಲ್ಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.