ಮಾತನಾಡುತ್ತಲೇ ಇರು
ನೀನು ಪುಟ್ಟ ಸಸಿಯೊಂದಿಗೆ
ಮಾತನಾಡುತ್ತಲೇ ಇರು
ಬೇರಿಳಿಸಿ, ರೆಂಬೆ ಚಾಚಿ,
ಹೂ, ಹಣ್ಣು ಬಿಡುವವರೆಗೂ
ನೀನು ನದಿಯೊಂದಿಗೆ
ಮಾತನಾಡುತ್ತಲೇ ಇರು
ಬಳುಕಿ, ಚಿಮ್ಮಿ, ನಗೆ ಉಕ್ಕಿ
ಕಡಲ ಸೇರುವವರೆಗೂ
ನೀನು ಚುಕ್ಕಿಯೊಂದಿಗೆ
ಮಾತನಾಡುತ್ತಲೇ ಇರು
ಹೊಳೆದು, ಕಣ್ಣು ಹೊಡೆದು
ಬೆಳಕು ನೆಲ ಸೇರುವವರೆಗೂ
ನೀನು ನಿನ್ನೊಂದಿಗೆ
ಮಾತನಾಡುತ್ತಲೇ ಇರು
ನೆಲ, ಆಗಸ, ಕಾಡು, ಕಡಲು
ಕಿವಿಗೊಡುತ್ತಿವೆ ಎನ್ನುವವರೆಗೂ
ನೀನು ನಿನ್ನೊಂದಿಗೆ
ಮಾತನಾಡುತ್ತಲೇ ಇರು
ಒಂಟಿತನದ ಹಿಮಗಡಲು
ಕರಗಿ ಹೋಗುವವರೆಗೂ
-ಎಂ.ಆರ್. ಕಮಲ, ಬೆಂಗಳೂರು
—–