ಅಪ್ಪ….
ಅಪ್ಪ ತನ್ನೆಲ್ಲಾ ನೋವುಗಳ
ಎದೆಯೊಳು ಸುಟ್ಟುಕೊಂಡು
ನಮಗೆ ಬೆಳಕಿನ ಪಂಜಂತೆ ನಿಂತವನು ಅಪ್ಪ…
ಹೆಗಲ ಮೇಲೊತ್ತು ಊರ ಜಾತ್ರೆಯ ಉತ್ಸವದಲ್ಲಿ
ಮುಗಿಲೆತ್ತರಕ್ಕೆ ಬೆಳೆಸಬೇಕೆಂಬ ಕನಸ ಕಂಡು
ತೇರಂತೆ ಹೊತ್ತು ಮೆರೆದವನು ಅಪ್ಪ…
ತನ್ನ ಬಡತನವ ಕಾಲಲ್ಲಿ ಹೊಸಕಿ
ಸ್ಲೇಟು ಸೀಮೆ ಸುಣ್ಣ ಕೊಡಿಸಿ
ತಾ ತುತೂಬಿದ್ದ ಹರಿದಂಗಿಯ ತೊಟ್ಟು
ಅದಕ್ಕೆ ಬಿದ್ದ ಮರು ಹೊಲಿಗೆಗಳ
ಸೂಜಿದಾರದಿ ಅವ್ವನೊಲಿದ ವಕ್ರ ರೇಖೆಗಳ
ಮುಲಾಜಿಲ್ಲದೆ ಲೆಕ್ಕವಿಡದೆ
ಹೊಸ ಬಟ್ಟೆಯ ಕೊಡಿಸಿ
ತನ್ನಂತಾಗಬಾರದೆಂದು ಶಾಲೆಗೆ ಕಳಿಸಿ
ಸಂಭ್ರಮಿಸಿದವನು ಅಪ್ಪ…
ಕಡುಕಷ್ಟಗಳ ತಣ್ಣನೆ ಕರಗಿಸಿಕೊಂಡು
ಬಿಸಿಲು ಮಳೆಗೆ ಮೈಯ ಚರ್ಮ ಸುಕ್ಕುಗಟ್ಟಿದರು
ಬೆವರ ಬಸಿದು ಕೈಗೆ ಬಂದ ಒಪ್ಪೆ ಗುಳ್ಳೆಗಳು
ಯಾರಿಗೂ ಕಾಣದ ಹಾಗೆ ಮುಳ್ಳಿಂದ ಚುಚ್ಚಿ
ಮಾಯವಾಗಿಸಿಕೊಂಡು ಕೈ ತುತ್ತನಿತ್ತವನು ಅಪ್ಪ…
-ಸಿದ್ದು ಜನ್ನೂರ್, ಚಾಮರಾಜನಗರ
—–