ಅನುದಿನ ಕವನ-೧೩೧೧, ಕವಿ: ವೀರಣ್ಣ ಮಡಿವಾಳರ, ನಿಡಗುಂದಿ, ಬೆಳಗಾವಿ ಜಿ. ಕವನದ ಶೀರ್ಷಿಕೆ:ಬೆಂಗಳೂರಿನ‌ ಬೀದಿಯಲ್ಲಿ

ಬೆಂಗಳೂರಿನ ಬೀದಿಯಲ್ಲಿ

ನಿತಾಂತ ಹೊರಟಿದ್ದೆ
ಕೈಯೊಂದು ಮುಂದೆ ಬಂತು

ಹತ್ತು ರೂಪಾಯಿ ಕೊಟ್ಟೆ

ನೀ ಅಂದುಕೊಂಡಿದ್ದೆಲ್ಲ ಆಗಲಿ
ಬದುಕಲ್ಲಿ ನೀ ಬಯಸಿದ್ದೆಲ್ಲ ಸಿಕ್ಕಲಿ

ಹರಸಿತು ಒಂದು ದನಿ

ನಾನು ಮನಸಾರೆ ಥ್ಯಾಂಕ್ಯೂ ಎಂದೆ

ನೂರಾರು ಹೆಜ್ಜೆ ನಡೆದಿರಬೇಕು

ಮತ್ತೊಂದು ಕೈ ಅಡ್ಡ ಬಂತು
ನಾನು ಹತ್ತು ರೂಪಾಯಿ ಕೊಟ್ಟೆ

ನೂರು ರೂಪಾಯಿ ಕೊಡು
ಗದರಿತು ಆ ದನಿ
ನಾನು ‘ಇಲ್ಲಮ್ಮ ಇಷ್ಟೇ ನನ್ನಿಂದ ಕೊಡಲು ಆಗುವುದು’ ಎಂದೆ ದೈನ್ಯದಿಂದ

ಆ ಹತ್ತು ರೂಪಾಯಿ ಹರಿದು
ನನ್ನ ಮುಖಕ್ಕೆಸೆದು

ನಿನ್ನ ಬದುಕು ಸತ್ಯಾನಾಶವಾಗಲಿ
ಎಂದು ಹೊರಟಿತು ಆ ದನಿ

ನಾನು ಪ್ರೀತಿಯಿಂದ ಧನ್ಯವಾದಗಳು ಎಂದು
ಮುಂದೆ ನಡೆದೆ

ಹೌದು
ಹಾರೈಕೆಗೂ ಶಾಪಕ್ಕೂ ನಾನು ಅರ್ಹ
ಇದು ಬದುಕು ಅದೂ ಬದುಕು
ಮತ್ತೊಂದೂ ಬದುಕೇ…


-ವೀರಣ್ಣ ಮಡಿವಾಳರ, ನಿಡಗುಂದಿ, ಬೆಳಗಾವಿ ಜಿ.
—–