ಅನುದಿನ‌ ಕವನ-೧೩೧೩, ಹಿರಿಯ ಕವಯಿತ್ರಿ:ಸವಿತಾ ನಾಗಭೂಷಣ, ಶಿವಮೊಗ್ಗ, ಕವನದ ಶೀರ್ಷಿಕೆ: ಸಮಾನರು

ಸಮಾನರು

ಬೆಟ್ಟಗಳನು ದೋಚಿದೆವು
ಕಾಡುಗಳನು  ಬಾಚಿದೆವು
ನೆಲ ಬಗೆದು ಜಲ ನುಂಗಿ
ನೋಟುಗಳನು ಚಾಚಿದೆವು!

ಎಷ್ಟು ನಿಖರ ಅಷ್ಟೇ ಪ್ರಖರ
ಸಿಡಿಸಿದಳಾಕೆ ಜಲ ಬಾಂಬು!

ಗಿಡ ಮರ ಕ್ರಿಮಿ ಕೀಟ
ಪಶು ಪಕ್ಷಿ ವಾನರ ನರ
ಗುಡಿ ಮಸೀದಿ ಚರ್ಚು
ಜಾತಿ ಮತ ಪಂಥ
ಮನೆ ಮಠಗಳ
ಕೊಚ್ಚಿ ಕೊಂಡೊಯ್ದಳು !

ದೇವರೂ ಮನುಷ್ಯರೂ
ಈಗ ಸಮಾನರು !

-ಸವಿತಾ ನಾಗಭೂಷಣ, ಶಿವಮೊಗ್ಗ
—–