ಅವ್ವ ಮತ್ತು ರೊಟ್ಟಿ
೧
ಇಂದೇಕೋ
ಹೆಂಚು ಕ್ಷುದ್ರವಾಗಿದೆ
ಹದವಾಗಿ ಬೇಯಬೇಕಿದ್ದ ರೊಟ್ಟಿ
ಸುಟ್ಟು ಕರಕಲಾಗುತ್ತಿದೆ
ನಿಗಿ ನಿಗಿ ಕೆಂಡವೂ ಮತ್ತಷ್ಟು ಕೆಂಪೇರುವಂತೆ
ಬದಲಾಗುತ್ತಿದೆ
ಅವ್ವನ ಸುಪ್ತ ನಿರೀಕ್ಷೆಯಂತೆ.
೨
ಇಂದೇಕೋ
ಹೆಂಚು ಗುನುಗುಡುತ್ತಿದೆ
ಶೃತಿ ಲಯ ತಾಳಗಳ ಗುಂಗಿನಲಿ
ರೊಟ್ಟಿ ಮಲ್ಲಿಗೆಯಂತೆ ಅರಳುತ್ತಿದೆ
ಸುಹಾಸನೆಯೊಂದೆ ಇಲ್ಲ
ಅದಿರುವುದು
ಅವ್ವನ ತುಂಟ ಮನಸ್ಸಿನಲ್ಲಿ.
೩
ಇಂದೇಕೋ
ಹೆಂಚು ನಿಡುಸುಯ್ಯುತ್ತಿದೆ
ಹದವಾಗಿ ಬೆಂದ ರೊಟ್ಟಿಯನ್ನು ಬಿಡದೆ
ಕಾವು ನೋಯಿಸುತ್ತಿದೆ
ಬೆವರಿನ ದುಂಡನೆ ಹನಿಗಳು
ಒಡೆದು ಚೂರಾಗುತ್ತಿವೆ
ಅವ್ವನ ನೊಂದ ಮನಸ್ಸಿನಂತೆ.
೪
ಇಂದೇಕೋ
ಹೆಂಚು ಮೌನ ತಳೆದಿದೆ
ಅರೆ ಬೆಂದ ರೊಟ್ಟಿ ನಗುವುದನ್ನು ಮರೆತು
ಮಲಗಿದೆ
ಒಲೆಯೊಳಗಿನ ಬೆಂಕಿಗೂ ಚಳಿಯಾಗುವಂತೆ
ಅನ್ಯ ಮನಸ್ಕಳಾಗಿದೆ
ಅವ್ವನ ಮುಗ್ಧ ಮನಸ್ಸಿನಂತೆ
೫
ಇಂದೇಕೋ
ಹೆಂಚು ಲಾಲಿ ಹಾಡುತ್ತಿದೆ
ಬೇಯಬೇಕಿರುವ ರೊಟ್ಟಿಯನ್ನು ತಬ್ಬಿ ಮೈಮರೆತಿದೆ
ಪರಕಾಯ ಪ್ರವೇಶದಂತೆ
ಜೋಗುಳದಲ್ಲಿನ ಮಮತೆಗೆ
ಕೆಂಡವೂ ತಣಿದು
ತನ್ಮಯಳಾಗಿದೆ
ಅವ್ವನ ಹೃದಯ ಸಾಗರದಂತೆ.
-ಲತಾ.ಎಲ್.ಜವಳಿ, ಹೊಸಪೇಟೆ
—–