ಆಗುವೆ ಮಹಾ ಬುದ್ಧ ಅಷ್ಟೇ!
ಅತ್ತಿತ್ತ ನೋಡಿ ಸುತ್ತಿ ಹೊರಳಿ ಮರಳಿ
ಊಹೂಂ ಏನಿಲ್ಲ ಅಲ್ಲಿ ವ್ಯರ್ಥ ಎಲ್ಲ
ಶೇಷಗಳಿಲ್ಲದ ನಿಶ್ಯೇಷ ದೊಡ್ಡ ಶೂನ್ಯ
ನೀರವ ಮೌನವನಾಳುವ ನೆನಪುಗಳಷ್ಟೇ
ಮೌನದ ನೀರವತೆ ತಾಕದ ನೆನಪಿನ
ಒರತೆಗೆ ತಡೆಯೊಡ್ಡಿ ಆಯ್ದ ಕೆಲವಕೆ
ಒಡ್ಡು ಕಟ್ಟಿ ಬಿಗಿದಿಟ್ಟು ಅಲ್ಲಾಡದಂತೆ
ಕೊಂಚವೂ ಸೋರದಂತೆ ಮಾಡಬೇಕಷ್ಟೇ
ಒಸರಿದರೂ ಎಲ್ಲೆ ಮೀರಿ ಒಮ್ಮೊಮ್ಮೆ
ಎದೆ ತುಂಬಿ ನಿಂದ ನೋವಿನ ಕಾವಿಗೆ
ಆವಿಯಾದೀತು ಪಸೆ ಚಣದಲಿ ಆದರೂ
ಹೊಗೆಯಾಡದಂತೆ ತೆರೆ ಸರಿಸಿ ನಗಬೇಕಷ್ಟೇ
ಹುಚ್ಚು ನಗೆ ಹೊಯ್ದಾಡಿ ತೆರೆ ತೆರೆಯಾಗಿ
ಕೆಣಕಿತು ಬಿಡದೆ ಬುದ್ಧಿ ಏನಿಲ್ಲೆಂದೆಯಲ್ಲ
ಎಲ್ಲಿ ಎಲ್ಲ ಶೇಷ ನಿಶ್ಯೇಷ ದೊಡ್ಡ ಶೂನ್ಯ ಮಂಕಾಯ್ತು ಮನ ಲಿಗಾಡಿದೆಯಲ್ಲ ಅದೆಷ್ಟು
ಇಲ್ಲ ಎಂಬುದಿಲ್ಲ ಕೇಳು ಇಲ್ಲಿ ಮರುಳೇ
ಆ ಇಲ್ಲ ಎಂಬುದೇ ಮರಿ ಹಾಕಿ ಬೆಳೆದು
ನೂರಾರು ಅದರ ಸಂತತಿ ಬಲೆ ಹೆಣೆದು
ನೀನಲ್ಲೇ ತಲೆ ಕೆಳಗಾಗಿ ನೇತಾಡೋದಷ್ಟೇ
ಬಿಟ್ಟ ಕಣ್ಣು ಬಿಟ್ಟಂತೆ ಇಷ್ಟಗಲ ಬಾಯ್ದೆರೆದ
ಮನಕೆ ಹೇಳಿತು ಬುದ್ದಿ ನೋಡು ಇದು ಸತ್ಯ
ಇಲ್ಲ ಏನೂ ಎಂಬುದ ಸಾಧಿಸಿದ ಗಳಿಗೆಯೇ
ನೀನಾಗುವೆ ಮಹಾ ಬುದ್ಧ ತಿಳಿದುಕೋ ಅಷ್ಟೇ!!
-ಸರೋಜಿನಿ ಪಡಸಲಗಿ
ಬೆಂಗಳೂರು
—–