ಅನುದಿನ ಕವನ-೧೩೧೯, ಕವಿ: ಸಿದ್ಧರಾಮ ಕೂಡ್ಲಿಗಿ, ಕಾವ್ಯ ಪ್ರಕಾರ:ಗಜಲ್

ಗಜಲ್

ನೋವಿನಲ್ಲೇ ಸುಂದರ ಬದುಕ ಹೆರಬೇಕು ಇಲ್ಲಿ ಹೊಸದು ಕಟ್ಟಲಿಕೆ
ಕಂಬನಿಯಲ್ಲೇ ಮುತ್ತುಗಳ ಪೋಣಿಸಬೇಕು ಇಲ್ಲಿ ಹೊಸದು ಕಟ್ಟಲಿಕೆ

ಮಣ್ಣ ಕಣಗಳಿಂದಲೇ ರೂಪುಗೊಳ್ಳಬೇಕು ಸಾವಿರ ಕೂವೆಗಳ ಹುತ್ತ
ಹಾಲಾಹಲದಲ್ಲೇ ಸಂಜೀವಿನಿ ಕಾಣಬೇಕು ಇಲ್ಲಿ ಹೊಸದು ಕಟ್ಟಲಿಕೆ

ಸುರಿಸುವ ಬೆವರ ಹನಿಗಳೊಳಗೇ ಮಿಂಚಬೇಕು ಜಗದ ನಗೆಯ ಸೊಬಗು
ವಿಶಾದ ನೋವಿನಲ್ಲೇ ಮುಗುಳು ಜನಿಸಬೇಕು ಇಲ್ಲಿ ಹೊಸದು ಕಟ್ಟಲಿಕೆ

ಸುಡುವ ಸೂರ್ಯನ ಕೆಂಗಣ್ಣಿನ ನೆರಳಿನಲ್ಲೇ ಹೊಸ ಹಾದಿ ಹುಡುಕಬೇಕು
ಸುಟ್ಟು ಹೋದರೂ ಫೀನಿಕ್ಸ್‌ನಂತಾಗಬೇಕು ಇಲ್ಲಿ ಹೊಸದು ಕಟ್ಟಲಿಕೆ

ಸುತ್ತುವರಿದ ಕನಸುಗಳ ಬಂಧನದಲ್ಲಿ ರೆಕ್ಕೆ ಮೂಡಿಸಿಕೊಳ್ಳಬೇಕು
ಆಸರೆಯಿರದಿದ್ದರೂ ಸಿದ್ಧ ಗರಿಗೆದರಬೇಕು ಇಲ್ಲಿ ಹೊಸದು ಕಟ್ಟಲಿಕೆ


-ಸಿದ್ಧರಾಮ ಕೂಡ್ಲಿಗಿ
—–