ಅನುದಿನ ಕವನ-೧೩೨೩, ಕವಿ: ಡಾ.ವಡ್ಡಗೆರೆ ನಾಗರಾಜಯ್ಯ, ಬೆಂಗಳೂರು, ಕವನದ ಶೀರ್ಷಿಕೆ: ಸ್ವಾತಂತ್ರ್ಯದ ಸೌಂದರ್ಯ

ಸ್ವಾತಂತ್ರ್ಯದ ಸೌಂದರ್ಯ

ಸ್ವಾತಂತ್ರ್ಯೋತ್ಸವ ದಿನದ ಹಿಂದಿನ ಕೆಲವು ದಿನಗಳಿಂದಲೂ
ನಾನು ನೋಡುತ್ತಿರುವ ಮೂರು ದೃಶ್ಯಗಳು

ದೃಶ್ಯ-1
ನಮ್ಮೂರ ಪುರಾತನ ಗುಡಿಯ ಮುಂದೆ
ನಾಳೆಯ ಸ್ವಾತಂತ್ರ್ಯ ದಿನದ ಆಚರಣೆಯ ತಾಲೀಮು ನಡೆಯುತ್ತಿದೆ.
ಅರೆಬೆತ್ತಲೆ ಫಕೀರ ಗಾಂಧಿ ತಾತನ ಚಿತ್ರಪಟದ ಮುಂದೆ
ನಾಳೆ ಮುಗಿಲೆತ್ತರ ಚೌರಂಗ ಝಂಡಾ ಹಾರಿಸಿ
ಗಾಂಧಿ ತಾತನ ಸ್ವದೇಶಿ ಮಂತ್ರ ಜಪಿಸಲಿರುವ
ದೇಶಭಕ್ತನೊಬ್ಬ ಸ್ವಾತಂತ್ರ್ಯದ ಹಿಂದಿನ ಕೆಲವು ದಿನಗಳಿಂದಲೂ
ತಮ್ಮದೇ ನಾಯಕರ ಚಿತ್ರಪಟಗಳನ್ನಿರಿಸಿ ತಮ್ಮದೇ ಝಂಡಾ ಹಾರಿಸಿ
ಹಿಡಿತುಂಬಾ ಮಣ್ಣು ಹಿಡಿದು ಕಣ್ಣಿಗೊತ್ತಿಕೊಂಡು
ಪುಣ್ಯಭೂಮಿ ಇದೆಂದೂ ತಾನು ಹುಟ್ಟಿದ್ದು ಇಲ್ಲೆಂದೂ
ಇದು ಭವ್ಯ ಭಾರತವೆಂದೂ ಭಾವುಕನಾಗಿ ಕನವರಿಸುತ್ತಾ
ಇದ್ದಕ್ಕಿದ್ದಂತೆ ಆವೇಶಗೊಂಡು, ಇಲ್ಲಿ ನಮ್ಮ ಅರಮನೆಯಿತ್ತು,
ಅರಮನೆಯ ಸುತ್ತಾ ಕೋಟೆಯಿತ್ತು, ಒಡ್ಡೋಲಗಗಳು ನಡೆಯುತ್ತಿದ್ದವು,
ಮಂತ್ರಘೋಷಗಳು ಮೊಳಗುತ್ತಿದ್ದವು, ಕವಿಗಳು ವಂದಿಮಾಗಧರು
ದಿಕ್ಕು ದಿಕ್ಕುಗಳಲ್ಲಿಯೂ ನಮ್ಮ ದೇಶವನ್ನು ಕುರಿತು ಕೀರ್ತಿಸುತ್ತಿದ್ದರು,
ನಮ್ಮ ಸಂಸ್ಕೃತಿಯನ್ನು ಪ್ರಿಯಮಧುರ ವಚನಗಳಲ್ಲಿ ಹೊಗಳುತ್ತಿದ್ದರು!
ಈ ಮಣ್ಣು ಹಿಂದೊಮ್ಮೆ ನಮಗೆ ಅಂತಹ ಅದ್ಭುತ ದೇಶವಾಗಿತ್ತು,
ಈಗ ನೋಡಿದರೆ ಎಲ್ಲವೂ ಇಲ್ಲಿ ಸುಟ್ಟು ಬೂದಿಯಾಗಿದೆ!
ಅದರ ಪುನರುತ್ಥಾನದ ಪವಿತ್ರ ಕೆಲಸಕ್ಕೆ ಮರಳಿ ಕೈಜೋಡಿಸಿ
ಬನ್ನಿ ಸೋದರರೇ ನಾವು ಈ ಭವ್ಯ ಭಾರತಾಂಬೆಯ ಮಕ್ಕಳು!
ಭಾರತ ಮಾತಾಕಿ ಜೈ! ಎಂದು ಕರೆಕೊಡುತ್ತಿದ್ದಾನೆ.

ದೃಶ್ಯ-2
ನಮ್ಮೂರ ಆಚೆಗಿರುವ ಹೊಲೆಮಾದಿಗರ ಕೇರಿಯ
ಬೋಧಿ ನೆರಳಿನ ಚರ್ಮ ಕುಟೀರದಲ್ಲಿ ಕುಳಿತ
ಕುಶಲ ಕರ್ಮಿ ಚಮ್ಮಾರನೊಬ್ಬ
ಸುಡು ಮಧ್ಯಾಹ್ನದ ಉರಿಬಿಸಿಲ ಬೀದಿಗಳಲ್ಲಿ
ಹುಟ್ಟಂಗದುಡುಗೆ ನಿರ್ವಾಣದಲ್ಲಿ ಆಟವಾಡುತ್ತಿರುವ
ತನ್ನ ಮಗುವನ್ನು ಉದ್ದೇಶಿಸಿ,
‘ಮಗೂ ನೀನು ನಾಳೆ ನಿನ್ನ ಶಾಲೆಯಲ್ಲಿ ಧರಿಸಲಿರುವ
ಅಂಬೇಡ್ಕರ್ ವೇಷವನ್ನು ತೊಡಿಸಿ ತೋರಿಸುತ್ತೇನೆ ಬಾ’ ಎಂದು
ಚೆಲುನುಡಿಗಳಲ್ಲಿ ಕೂಗಿ ಕರೆದು,
ಕುಟೀರದ ಗೋಡೆಗೆ ನೇತುಬಿದ್ದಿರುವ
ದಿವಿನಾದ ಸೂಟುಬೂಟು ಧರಿಸಿದ ಬಾಬಾ ಸಾಹೇಬರ
ಚಿತ್ರಪಟದಲ್ಲಿ ಮಸಿಗಟ್ಟಿ ಕಾಣುತ್ತಿರುವ ತೋರುಬೆರಳನ್ನೂ,
ಕೈಲಿಹಿಡಿದ ಸಂವಿಧಾನವನ್ನೂ,
ಚೌರಂಗ ಝಂಡಾದ ನಡುವಿಗಿರುವ ಧಮ್ಮಚಕ್ರವನ್ನೂ ತೋರಿಸುತ್ತಾ…
ಅಂಬೇಡ್ಕರ್ ತಮ್ಮ ದೇವರೆಂದೂ ದುರ್ಬಲರ ರಕ್ಷಕನೆಂದೂ,
ದೇಶಕೋಶಗಳ ಸುತ್ತಿ ದೇಶ ವಿದೇಶಗಳ ಸಕಲ ನ್ಯಾಯಶಾಸ್ತ್ರ
ಗ್ರಂಥಗಳನ್ನು ಓದಿದ ಮಹಾ ಮೇಧಾವಿಯೆಂದೂ
ಸಾಮಾಜಿಕ ನ್ಯಾಯದ ಪಾಠಗಳನ್ನು ರೂಪಿಸಿದವರೆಂದೂ
ಸಕಲ ದುಃಖಿಗಳ ವಿಮೋಚಕರೆಂದೂ ವಿವರಿಸಿ ಹೇಳುತ್ತಿದ್ದಾನೆ!
ಕಡೆಗೆ ಇದ್ದಕ್ಕಿದ್ದಂತೆ ಜ್ಞಾನೋದಯವಾದವನಂತೆ
ನೆಲಕೆ ಜಾರಿದ ಬೆವರ ಹನಿ ತೋರಿಸಿ, ಮಗೂ ಇದು ನಮ್ಮ ಭೂಮಿ,
ನಮ್ಮದೇ ದುಡಿಯುವ ಕುಲಬಳಗ ಮಣ್ಣಾಗಿ
ಮೌನವಾಗಿ ಮಲಗಿದೆ ಇಲ್ಲಿ ಭೂಮಿಯಾಗಿ!
ನಮ್ಮದೇ ದುಡಿಯುವ ಜೀವಜೀವಾದಿಗಳ ಬೆವರು ತುಂಬಿದೆ
ಇಲ್ಲಿ ಭೂಮಿಯೊಡಲಲ್ಲಿ ಜಲನಿಧಿಯಾಗಿ
ಹಸಿರುಕ್ಕಿದೆ ಭೂದೇವಿಯ ಮೈತುಂಬಾ ಉಡುಗೆಯಾಗಿ
ಬೆವರುಕ್ಕಿದೆ ಸಮುದ್ರದ ತುಂಬೆಲ್ಲಾ ಸಿಹಿ ಉಪ್ಪಾಗಿ!
ಭಾರತ ಎಂಬುದು ಭೂಪಟವ ಮೀರಿದ ಮನೋಭೂಮಿ;
ನಮಗೆ ಭೂಮಿ ಎಂದರೆ ಒಂದು ದೇಶವಲ್ಲ;
ದೇಶವೆಂದರೆ ಬರಿ ಮಣ್ಣಲ್ಲ; ಜನ! ನನ್ನ ಜನ! ನನ್ನ ಜೀವಗೋಳ!
ದೇಶಕೋಶ ಮತಭಾಷೆ ಮೀರಿದ ಭಾವಗೋಳ!!
ನನ್ನ ಜನರ ರಕ್ತಮಾಂಸ ಎಮಕೆಗಳೆಲ್ಲಾ
ಅರಮನೆ ಕೋಟೆ ಕೊತ್ತಲುಗಳಾಗಿ ಎದ್ದಿವೆ ಇಲ್ಲಿ;
ಅವರ ಈ ಪುಣ್ಯಭೂಮಿಯಲ್ಲಿ!
ಧರೆಯ ತಂದು ಧರೆಗೆ ದೊಡ್ಡವರೆನ್ನಿಸಿದ ನಮಗೆ
ನೆಲದ ನೆಲೆಯಿಲ್ಲ ಹೇಳ ಹೆಸರಿಲ್ಲ ಊರುಕೇರಿಗಳಿಲ್ಲ,
ಭೂಮಿಗೆ ಚಕುಬಂಧಿ ಬರೆದು ಚೌಕಟ್ಟು ಹಾಕಿರುವ ಧಣಿಗಳೆದುರು
ಚೇತನಗಳಿಗೆ ಕೇತನಗಳ ಕಟ್ಟಿರುವ ಹಮ್ಮೀರರೆದುರು
ನಮಗೆ ಅವರಂಥ ಮನುಷ್ಯನ ಚಹರೆಗಳಿಲ್ಲ
ಅವರಂಥ ಸ್ವಾತಂತ್ರ್ಯದ ಕ್ರೂರ ಸೌಂದರ್ಯ ನಮಗೆ ಬೇಕಿಲ.
ಮಗೂ ನಾಳೆ ನೀನು ನಿನ್ನ ಶಾಲೆಯಲ್ಲಿ ಅವರು ತೊಡಿಸುವ
ಅಂಬೇಡ್ಕರ್‌ರ ವೇಷದ ಮುಖವಾಡ ತೊಡಬೇಡ ಎಂದು ಹೇಳುತ್ತಿದ್ದಾನೆ

ದೃಶ್ಯ-3
ಚರ್ಮ ಕುಟೀರದ ಎದುರು ಬೋಧಿ ನೆರಳಿನಲ್ಲಿ ಆಟವಾಡುವ ಮಗು
ತನ್ನ ಒಂದು ಕೈಯಲ್ಲಿ ಹರಿದ ಭಾರತದ ಭೂಪಟವನ್ನು
ಮತ್ತೊಂದು ಕೈಯಲ್ಲಿ ಭೂಪಟದಂತೆಯೇ ಸವೆದು ಕಿತ್ತುಹೋಗಿರುವ
ಚಪ್ಪಲಿಯನ್ನು ಹಿಡಿದು ಅಡಿಗಲ್ಲಿನ ಮೇಲಿಟ್ಟು
ಹರಿದ ಸಕಲವನ್ನೂ ಜೋಡಿಸಿ ಹೊಲೆಯುವ ಛಲ–ಹಂಬಲಗಳಿಂದ
ಗಲ್ಲೆಬಾನಿಯ ಕರಿಜಲ–ಉಳಿ–ದಾರ–ಚಿಂಪರಿಕೆ ತೆಗೆದುಕೊಂಡು
ಸುಡು ಮಧ್ಯಾಹ್ನದ ಉರಿಬಿಸಿಲಿನಲ್ಲಿ ಸಕಲ ಚರಾಚರ ಜೀವಿಗಳ
ನೆತ್ತಿ ಕಾಯುವ ಬೋಧಿ ನೆರಳಿನ ತಣ್ಣೆಳಲ ತಂಪಾದ ಸ್ಯಾತಂತ್ರ್ಯದ
ಸೌಂದರ್ಯವನ್ನು ತನ್ನ ಚರ್ಮಕುಟೀರದಲ್ಲಿ ನಾಳೆ ಉದಯಿಸಲಿರುವ
ಸ್ವಾತಂತ್ರ್ಯದ ಹೊಸ ಸೂರ್ಯ ನೀಡುವನೆಂದು ಕಾಯುತ್ತಾ ಧ್ಯಾನಿಸುತ್ತಿದೆ!


-ಡಾ.ವಡ್ಡಗೆರೆ ನಾಗರಾಜಯ್ಯ, ಬೆಂಗಳೂರು
—–