ಗಜ಼ಲ್
ಇದಿರಾದಾಗ ಮುಗುಳ್ನಕ್ಕು ಕೈಕುಲುಕುತ್ತವೆ ಮರೆಯಾದಾಗ ಕಾಲೆಳೆಯುತ್ತವೆ ಪರಿಚಿತ ಮುಖಗಳು
ಸಾಮೀಪ್ಯದಲ್ಲಿ ಹೊಗಳಿ ಮೇಲಕ್ಕೇರಿಸುತ್ತವೆ ಇಲ್ಲವಾದಾಗ ವಿಷ ಕಕ್ಕುತ್ತವೆ ಪರಿಚಿತ ಮುಖಗಳು
ಹೇಗೆ ಕಲಿಸುವುದು ಹೇಳಿ ಇವುಗಳಿಗೆ ಮನುಷ್ಯಪ್ರೀತಿ ಮಾನವೀಯತೆ ಪಾಠ
ಹತ್ತಿರವಿದ್ದಾಗ ಖುಷಿಪಟ್ಟು ಸಂಭ್ರಮಿಸುತ್ತವೆ ಕಣ್ಮರೆಯಾದಾಗ ಹೊಟ್ಟೆ ಕಿಚ್ಚಾಗುತ್ತವೆ ಪರಿಚಿತ ಮುಖಗಳು
ಮತ್ತೆ ಮತ್ತೆ ಅಪ್ಪುತ್ತೇನೆ ಮತ್ತೆ ಮತ್ತೆ ನಂಬುತ್ತೇನೆ ಇವುಗಳನ್ನೇ ಮನುಷ್ಯನಲ್ಲವೆ?
ಒಂದು ಕ್ಷಣ ದುಃಖಕ್ಕೆ ಕಿವಿಯಾಗುತ್ತವೆ ಮರುಕ್ಷಣವೇ ಇನ್ನೆಲ್ಲೋ ಹೋಗಿ ಬಾಯಾಗುತ್ತವೆ ಪರಿಚಿತ ಮುಖಗಳು
ಅದೆಷ್ಟು ಸಣ್ಣತನ ಇವುಗಳಿಗೆ ಏಳ್ಗೆಯನ್ನು ಸಹಿಸದೆ ಕರುಬುತ್ತವೆ ಒಳಗೊಳಗೆ
ಬಳಿ ಬಂದಾಗ ಬೆಣ್ಣೆಯಾಗುತ್ತವೆ ದೂರ ಸಾಗುವುದಷ್ಟೇ ತಡ ಬೆಂಕಿಯುಗುಳುತ್ತವೆ ಪರಿಚಿತ ಮುಖಗಳು
ನೀವೆಷ್ಟೇ ಕೆಂಡ ಕಾರಿದರೂ ಬೆನ್ನಿಗಿರಿದು ನಕ್ಕರೂ ನುಂಗಿಕೊಂಡು ನಡೆವ ‘ನಾಗೇಶಿ’
ಉರಿದುರಿದು ಬೂದಿಯಾಗುತ್ತವೆ ಕೊರಗಿ ಕೊರಗಿ ಕಣ್ಮರೆಯಾಗುತ್ತವೆ ಪರಿಚಿತ ಮುಖಗಳು
-ನಾಗೇಶ್ ಜೆ. ನಾಯಕ, ಸವದತ್ತಿ
——