ಅನುದಿನ ಕವನ-೧೩೨೯, ಕವಿ: ಅನಂತ್ ಕುಣಿಗಲ್, ಬೆಂಗಳೂರು, ಕವನದ ಶೀರ್ಷಿಕೆ:ಗಾಳಿ ತುಂಬುವ ಹುಡುಗ

ಗಾಳಿ ತುಂಬುವ ಹುಡುಗ

ಉಸ್ ಉಸ್ ಎನ್ನುತ್ತಾ
ಜಗದ ಎಲ್ಲ ಗಾಳಿ
ಬಲೂನು ತುಂಬುತ್ತಿತ್ತು
ಹುಡುಗನ ಕಾಲುಗಳು
ಸೋತಿರಲಿಲ್ಲ
ಹಸಿವು ಕಣ್ಣಲ್ಲಿತ್ತು

ಹೋಗಿ ಬರುವವರು
ಹಾಯ್ ಹೇಳುತ್ತಿದ್ದರು
ಬಣ್ಣ ಬಣ್ಣದ ಬಲೂನಿಗೆ
ಕೊಳ್ಳುವವರು ಕಮ್ಮಿ
ಹುಡುಗನ ಆಸೆ ಬತ್ತಿರಲಿಲ್ಲ

ಗಾಳಿ ತುಂಬಿ ತುಂಬಿ
ಬಲೂನು ಕಟ್ಟುತ್ತಲೇ ಇದ್ದ
ದೇಶ ಕಟ್ಟುವಂತೆಯೇ!
ಎಲ್ಲ ಬಣ್ಣಗಳೂ ಇದ್ದವು
ಸರ್ವಜನಾಂಗದ ಶಾಂತಿಯ ತೋಟದಂತೆ

ಹೊಳೆವ ಕಣ್ಣುಗಳಿಂದ
ಆಕರ್ಷಿಸಿ ಕರೆಯುತ್ತಿದ್ದ
ಅಂಗಲಾಚಿ ಬೇಡುತ್ತಿದ್ದ
ಅಸಹಾಯಕನಾಗಲಾರದೆ
ದುಡಿದೇ ತಿನ್ನುವ ನಿರ್ಧಾರ ಮಾಡಿದ್ದ

ಹಸಿವು ಹೊಟ್ಟೆಗೋ..
ದೇಶ ಕಟ್ಟುವ ಚಿಂತನೆಗೋ..
ಯಾರೂ ತಿರುಗಿ ನೋಡಲಿಲ್ಲ
ಹುಡುಗ ಬಲೂನುಗಳನ್ನು ತಿರುಗಿಸುತ್ತಾ
ಜಾಗ ಬದಲಿಸಿದ
ಅದೇ ಹಸಿವೆಯ ಕಣ್ಣುಗಳಿಂದ
ಮತ್ತೆ ಕರೆಯುತ್ತಿದ್ದ..


– ಅನಂತ ಕುಣಿಗಲ್, ಬೆಂಗಳೂರು
—–