ಬಳ್ಳಾರಿ, ಆ.21: ನಾಡೋಜ ಬುರ‍್ರಕಥಾ ದರೋಜಿ ಈರಮ್ಮ ರಾಷ್ಟ್ರೀಯ ಪ್ರಶಸ್ತಿಗೆ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ, ಸಾಹಿತಿ ಡಾ. ನಿಂಗಪ್ಪ ಮುದೇನೂರು, ಕನ್ನಡ ಸಂಸ್ಕೃತಿ ಇಲಾಖೆಯ ವಿಶ್ರಾಂತ ಉಪ ನಿರ್ದೇಶಕ ಚೋರನೂರು ಟಿ ಕೊಟ್ರಪ್ಪ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಹಳೇ ದರೋಜಿಯ ಬುರ‍್ರಕಥಾ ಶಿವಮ್ಮ ಮತ್ತು ಬುರ‍್ರಕಥಾ ಕಲಾವಿದ ಸೋಮಲಾಪುರ ಬಲಗೊಲ್ಲ ಮಾರೆಪ್ಪ ಅವರನ್ನು ಆಯ್ಕೆಮಾಡಲಾಗಿದೆ ಎಂದು ನಾಡೋಜ ಬುರ‍್ರಕಥಾ ದರೋಜಿ ಈರಮ್ಮ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಡಾ. ಅಶ್ವ ರಾಮು ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಡಾ. ಅಶ್ವ ರಾಮು ಅವರು ನಾಡೋಜ ಬುರ‍್ರಕಥಾ ಈರಮ್ಮನವರ ೧೦ನೇ ಪುಣ್ಯಸ್ಮರಣೆಯ ಅಂಗವಾಗಿ ನಗರದ ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ಆ. ೨೪ ರಂದು ಶನಿವಾರ ಬೆ. ೧೦-೩೦ ಗಂಟೆಗೆ ಆಯೋಜಿಸಿರುವ “ಬುರ‍್ರಕಥಾ ಪರಂಪರೆಯ ಅನನ್ಯತೆ” ಕುರಿತು ರಾಷ್ಟ್ರಮಟ್ಟದ ವಿಚಾರ ಸಂಕಿರಣ ಹಾಗೂ ನಾಡೋಜ ಬುರ‍್ರಕಥಾ ದರೋಜಿ ಈರಮ್ಮ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ೨೦೨೩-೨೪ನೇ ಸಾಲಿನ ಪ್ರಶಸ್ತಿಗಳನ್ನು ರಾಯಚೂರು ವಿವಿ ಕುಲಪತಿ ಪ್ರೊ. ಹರೀಶ್ ರಾಮಸ್ವಾಮಿ ಅವರು ಪ್ರದಾನ ಮಾಡಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಕೊಪ್ಪಳ ವಿವಿ ಕುಲಪತಿ ಪ್ರೊ. ಬಿ.ಕೆ ರವಿ ಅವರು ಉದ್ಘಾಟಿಸುವರು. ಅಧ್ಯಕ್ಷತೆಯನ್ನು ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ಹಂಪಿ ಕನ್ನಡ ವಿವಿಯ ನಿವೃತ್ತ ಪ್ರಾಧ್ಯಾಪಕ ಪ್ರೊ. ಕೆ ಎಂ ಮೇತ್ರಿ, ವೀವಿ ಸಂಘದ ಕಾರ್ಯದರ್ಶಿ ಡಾ. ಅರವಿಂದ ಪಟೇಲ್, ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ್, ಕರ್ನಾಟಕ ಬುಡ್ಗ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಣ್ಣ ಮಾರೆಪ್ಪ, ಕರ್ನಾಟಕ ಜಾನಪದ ಪರಿಷತ್ತು ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಮಂಜುನಾಥ್ ಮತ್ತು ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಳೇ ದರೋಜಿಯ ಅಶ್ವ ರಾಮಣ್ಣ ಉಪಸ್ಥಿತರಿರುವರು.
ಉಪನ್ಯಾಸ: “ಬುರ‍್ರಕಥಾ ಪರಂಪರೆಯ ಅನನ್ಯತೆ” ಕುರಿತು ಹಂಪಿ ಕನ್ನಡ ವಿವಿಯ ಹಿರಿಯ ಪ್ರಾಧ್ಯಾಪಕ, ಜಾನಪದ ವಿದ್ವಾಂಸ ಪ್ರೊ. ಚಲುವರಾಜು ಅವರು ವಿಶೇಷ ಉಪನ್ಯಾಸ ನೀಡುವರು.
ಕಾರ್ಯಕ್ರಮ ವಿಶೇಷತೆ: ವಾರ್ತಾ ಇಲಾಖೆ ನಿರ್ಮಿಸಿರುವ ದರೋಜಿ ಈರಮ್ಮನವರ ಸಾಕ್ಷ್ಯಚಿತ್ರ, ಮಂಜುನಾಥ ಗೋವಿಂದವಾಡ ಅವರ ಕುಂಚದಲ್ಲಿ ಅರಳಿರುವ ರೇಖಾಚಿತ್ರ, ಡಾ.ಅಶ್ವ ರಾಮು ಸಂಗ್ರಹಿಸಿರುವ ಛಾಯಚಿತ್ರ, ಬರ‍್ರಕಥಾ ಗಾಯನ, ತತ್ವಪದ, ಜಾನಪದ ಗೀತಾಗಾಯನ, ವಚನ ಗಾಯನ ಮತ್ತು ಜನಪದ ನೃತ್ಯ ಪ್ರದರ್ಶನ ಇರುತ್ತದೆ.
ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಎಂ. ಶರಣಬಸವನಗೌಡ, ಪ್ರಾಚಾರ್ಯ ಡಾ. ಸತೀಶ ಹಿರೇಮಠ ಹಾಗೂ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಡಾ. ಅಶ್ವ ರಾಮು ಅವರು ಕಾರ್ಯಕ್ರಮಕ್ಕೆ ಸರ್ವರನ್ನು ಸ್ವಾಗತಿಸಿದ್ದಾರೆ. ನಾಡೋಜ ಬುರ‍್ರಕಥಾ ಈರಮ್ಮ ಫೌಂಢೇಷನ್ ಹಾಗೂ ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಕಾರ್ಯಕ್ರಮ ಜರಗುವುದು.
ಪ್ರಶಸ್ತಿ ಪುರಸ್ಕೃತರ ಪರಿಚಯ:
ಡಾ. ನಿಂಗಪ್ಪ ಮುದೇನೂರು: ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಮುದೇನೂರು ಗ್ರಾಮದಲ್ಲಿ ೦೧-೦೬-೧೯೭೦ ರಂದು ಜನನ. ತಂದೆ ನೀಲಪ್ಪ ತಾಯಿ ಗಂಗಮಾಳಮ್ಮ, ಇವರು ಎಂ.ಎ, ಎಂ.ಫಿಲ್ ಪದವಿಯನ್ನು ಗುಲಬರ್ಗಾ ವಿಶ್ವವಿದ್ಯಾಲಯದ ಸಂಡೂರು ಸ್ನಾತಕೋತ್ತರ ಕೇಂದ್ರದ ನಂದಿಹಳ್ಳಿಯಲ್ಲಿ ಸೊಂಡೂರು ಕುಮಾರಸ್ವಾಮಿ ಎಂಬ ವಿಷಯದಲ್ಲಿ ಎಂ.ಫಿಲ್ ಪದವಿಯನ್ನು, ಕನ್ನಡ ಜನಪದ ಮಹಾಕಾವ್ಯಗಳ ಸಾಂಸ್ಕೃತಿಕ ವೀರರು ಎನ್ನುವ ವಿಷಯದಲ್ಲಿ ಪಿಎಚ್ ಡಿ ಪದವಿಯನ್ನು ಕನ್ನಡ ವಿವಿಯಲ್ಲಿ ಪಡೆದಿದ್ದಾರೆ. ಪ್ರಸ್ತುತ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಹಾಗೂ ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ‘ಬುರ‍್ರಕಥಾ ಈರಮ್ಮ : ಅಲೆಮಾರಿಯ ಆತ್ಮಕಥನ’, ಮತ್ತು ‘ವಿಜ್ಞಾನ ಗಂಗಾ-೩’ ಎಂಬ ಕೃತಿಗಳು ಬೆಳಗಾವಿಯ ರಾಣಿ ಚೆನ್ನಮ್ಮ ವಿ.ವಿ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯಗಳ ಪದವಿಗೆ ಪಠ್ಯಗಳಾಗಿರುವುದು ವಿಶೇಷವಾಗಿವೆ. ನಾಡಿನ ಹಲವಾರು ಪ್ರತಿಷ್ಠಿತ ಪತ್ರಿಕೆಗಳಲ್ಲಿ, ವಿಶೇಷಾಂಕಗಳಲ್ಲಿ ನಿಂಗಪ್ಪ ಮುದೇನೂರು ಇವರ ಬರಹಗಳು ಪ್ರಕಟಗೊಂಡಿವೆ. ‘ತಾಯಿ ನೆಲದಲ್ಲಿ’ ಎಂಬ ಇವರ ಮೊದಲ ಕವನ ಸಂಕಲನಕ್ಕೆ ೧೯೯೭ರಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯವು ರಾಜ್ಯೋತ್ಸವ ಪುಸ್ತಕ ಬಹುಮಾನ, ‘ಬುರ‍್ರಕಥಾ ಈರಮ್ಮ : ಅಲೆಮಾರಿಯ ಆತ್ಮಕಥನ’ ಕೃತಿಗೆ ೨೦೦೫ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಈ ಕೃತಿಯನ್ನು ಹೈದ್ರಾಬಾದ್‌ನ ರಂಗನಾಥ ರಾಮಚಂದ್ರರಾವ್ ಅವರು ತೆಲುಗು ಭಾಷೆಗೆ ಅನುವಾದಿಸಿ ಪ್ರಕಟಿಸಿದ್ದಾರೆ. ಇವರಿಗೆ ಡಾ.ನಲ್ಲೂರು ಜಾನಪದ ಪ್ರಶಸ್ತಿ, ಡಾ.ಸುಭಾಷ್ ಭರಣಿ ಸಾಹಿತ್ಯ ಪ್ರಶಸ್ತಿ, ಸಂಗೊಳ್ಳಿ ರಾಯಣ್ಣ ಸಾಹಿತ್ಯ ಪ್ರಶಸ್ತಿ, ಸಂಕ್ರಮಣ ಕಾವ್ಯ ಪ್ರಶಸ್ತಿ, ಬೇಂದ್ರೆ ಕಾವ್ಯ ಪ್ರಶಸ್ತಿ ಇನ್ನಿತರ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ಚೋರನೂರು ಟಿ ಕೊಟ್ರಪ್ಪ:
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಚೋರುನೂರು ಗ್ರಾಮದಲ್ಲಿ ತಂದೆ ದಿವಂಗತ ಡಾ. ಟಿ ಕೆ ಬಸವರಾಜ, ತಾಯಿ ದಿವಂಗತ ಶ್ರೀಮತಿ ರುದ್ರಮ್ಮನವರ ಮಗನಾಗಿ ದಿನಾಂಕ ೧೬.೦೭.೧೯೫೭ ರಂದು ಜನನ. ಇವರು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಎಂ.ಎ ಅರ್ಥಶಾಸ್ತ್ರ ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರ್ಗಿಯಲ್ಲಿ ಎಲ್.ಎಲ್.ಬಿ ಪದವಿಯನ್ನು ಪಡೆದಿದ್ದಾರೆ.
ಅರ್ಥಶಾಸ್ತ್ರದ ಉಪನ್ಯಾಸಕರಾಗಿ, ಜಿಲ್ಲಾ ವಾರ್ತಾಧಿಕಾರಿಗಳಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾಗಿ, ಉಪನಿರ್ದೇಶಕರಾಗಿ, ಉತ್ತಮ ಸಂಘಟಕರಾಗಿ, ಕಲಾಪ್ರೋತ್ಸಾಹಕರಾಗಿ, ಅಕಾಡೆಮಿಯ ರಿಜಿಸ್ಟ್ರಾರ್ ಆಗಿ ಪದೋನ್ನತ್ತಿ ಹೊಂದಿ ನಿವೃತ್ತಿಯನ್ನು ಹೊಂದಿದ್ದಾರೆ. ಪ್ರತಿಷ್ಟಿತ ಬಳ್ಳಾರಿ ಜಿಲ್ಲೆಯ ವೀರಶೈವ ವಿದ್ಯಾವರ್ಧಕ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿಗಳಾಗಿ, ಪ್ರಸ್ತುತ ಕಾರ್ಯಕಾರಿ ಸದಸ್ಯರಾಗಿ ಕಾರ್ಯನಿರ್ವಸುತ್ತಿದ್ದಾರೆ.
ಕಲೆಯನ್ನೇ ನಂಬಿಕೊಂಡು ಜೀವನ ಮಾಡುತ್ತಿರುವ, ಸಂಕಷ್ಟದ ಸ್ಥಿತಿಯಲ್ಲಿರುವ ಸಾವಿರಾರು ಹಿರಿಯ ಕಲಾವಿದರಿಗೆ ಕಲಾವಿದರ ಮಾಸಾಶನ ಕೊಡಿಸುವಲ್ಲಿ ಇವರು ಯಶಸ್ವಿಯಾಗಿದ್ದಾರೆ. ಹಂಪಿಉತ್ಸವದ ಸಂದರ್ಭದಲ್ಲಿ ಅಲೆಮಾರಿಗಳ ಕಲಾಪ್ರದರ್ಶನಕ್ಕಾಗಿಯೇ ಒಂದು ಪ್ರತ್ಯೇಕ ವೇದಿಕೆ ನಿರ್ಮಿಸುವಲ್ಲಿ ಚೋರನೂರು ಕೊಟ್ರಪ್ಪನವರು ಶ್ರಮಿಸಿದ್ದಾರೆ.
ಬುರ‍್ರಕಥಾ ಶಿವಮ್ಮ:
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಹಳೇದರೋಜಿ ಗ್ರಾಮದ ಅಲೆಮಾರಿ ಬುಡ್ಗ ಜಂಗಮ ಸಮುದಾಯದವರಾಗಿದ್ದು, ಇವರ ತಂದೆ ಅಶ್ವ ಲಾಲಪ್ಪ, ತಾಯಿ ನಾಗಮ್ಮ, ಸಹೋದರಿ ನಾಡೋಜ ಬರ‍್ರಕಥಾ ಈರಮ್ಮನವರ ಮೂಲಕ ಕಲಿತ ಬರ‍್ರಕಥೆ ಕಲೆಯಲ್ಲಿ ಕುಮಾರರಾಮನ ಕಾವ್ಯ, ಬೊಬ್ಬಿಲಿ ನಾಗಿರೆಡ್ಡಿ ಕಾವ್ಯ, ಬಾಲನಾಮ್ಮನ ಕಾವ್ಯ, ಕೃಷ್ಣಗೊಲ್ಲರ ಕಾವ್ಯ, ಮಾರವಾಡಿ ಶೇಠ್ ಕಾವ್ಯ, ದೇಶಿಂಗ ರಾಜನ ಕಾವ್ಯ, ಸ್ಯಾಸಿ ಚಿನ್ನಮ್ಮನ ಕಾವ್ಯ, ಆದೋನಿ ಲಕ್ಷö್ಮಮ್ಮನ ಕಾವ್ಯ, ಗಡೆಕಲ್ಲು ನಾಗಿರೆಡ್ಡಿ ಕಾವ್ಯ ಹೀಗೆ ಸುಮಾರು ೧೨ ಬರ‍್ರಕಥಾ ಮಹಾಕಾವ್ಯಗಳನ್ನು ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ಹೇಳುತ್ತಾರೆ.
ಇವರು ೬೫ ವರ್ಷಗಳ ಕಾಲ ಆಂಧ್ರ ಮತ್ತು ಕರ್ನಾಟಕದ ಗಡಿಭಾಗದ ಅನಂತಪುರ, ಕರ್ನೂಲ್, ಬಳ್ಳಾರಿ, ಗಂಗಾವತಿ, ಸಂಡೂರು, ಕಂಪ್ಲಿ, ಸಿರುಗುಪ್ಪ, ಕುರುಗೋಡು, ಹೊಸಪೇಟೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬರ‍್ರಕಥೆಯನ್ನು ಪ್ರದರ್ಶನ ನೀಡಿದ್ದಾರೆ. ಹಂಪಿ ಉತ್ಸವ, ಮೈಸೂರು ದಸರಾ ಉತ್ಸವ, ಗಡಿನಾಡ ಉತ್ಸವ, ಬಳ್ಳಾರಿ ಉತ್ಸವ, ಜಾನಪದ ಜಾತ್ರೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ. ಇವರಿಗೆ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ, ಅನೇಕ ನಾಗರೀಕ ಸನ್ಮಾನಗಳು ಲಭಿಸಿವೆ.
ಬಲಗೊಲ್ಲ ಮಾರೆಪ್ಪ ಸೋಮಲಾಪುರ:
ಕಂಪ್ಲಿ ತಾಲೂಕಿನ ಸೋಮಲಾಪುರ ಗ್ರಾಮದ ಅಲೆಮಾರಿ ಬುಡ್ಗ ಜಂಗಮ ಸಮುದಾಯದ ಬುರ‍್ರಕಥಾ ಕಲಾವಿದ. ಇವರ ತಂದೆ ಮಾರೇಪ್ಪ, ತಾಯಿ ಪೆದ್ದಕ್ಕ ಇವರು ಆಂಧ್ರ ಮತ್ತು ಕರ್ನಾಟಕದ ಗಡಿಭಾಗದಿಂದ ಬಂದು ಬುರ‍್ರಕಥಾ ಕಲಾ ಪ್ರದರ್ಶನ ನೀಡುತ್ತಾ ಜೀವನ ಸಾಗಿಸಿದ್ದಾರೆ.
ಮಾರೆಪ್ಪ ಅವರು ತಂದೆ-ತಾಯಿಗಳ ಮೂಲಕ ಕಲಿತ ಬುರ‍್ರಕಥೆ ಕಲೆಯಲ್ಲಿ ರ‍್ಯವಾಳ ಕಥ (ಮಾರವಾಡಿ ಶೇಠ್ ಕಾವ್ಯ), ಶರಭಂಧ ರಾಜನ ಕಥೆ, ಬಾಲನಾಗಮ್ಮನ ಕಥೆ, ಬೊಬ್ಬುಲಿ ಕಥೆ, ದೇಶಿಂಗ ರಾಜನ ಕಥೆ, ಸ್ಯಾಸಿ ಚಿನ್ನಮ್ಮನ ಕಥೆ, ಸವಾರಮ್ಮ ಕಥೆ, ರಾಮುಲಮ್ಮ ಕಥೆ, ಪಸುಲ ಬಾಲರಾಜು ಕಥೆ, ಸೂರ್ಯಚಂದ್ರ ಮಹಾರಾಜ ಕಥೆ, ಕುಮಾರರಾಮನ ಕಥೆ, ಆದೋನಿ ಲಕ್ಷಮ್ಮಮ್ಮನ ಕಥೆ, ಗಡೆಕಲ್ಲು ನಾಗಿರೆಡ್ಡಿ ಕಥೆ, ದುರ್ಗಂಕೋಟ ಪಾಪರಾಯುಡು ಕಥೆ ಹೀಗೆ ಸುಮಾರು ೧೫ ಬರ‍್ರಕಥಾ ಮಹಾಕಾವ್ಯಗಳನ್ನು ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ಹೇಳುತ್ತಾರೆ. —–