ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ತೋರುವ ಉತ್ತಮ‌ ಸಾಧನೆಗೆ ಶಿಕ್ಷಣವೇ ಸ್ಫೂರ್ತಿ -ಮೇಯರ್ ಮುಲ್ಲಂಗಿ ನಂದೀಶ್

ಬಳ್ಳಾರಿ, ಆ. ೨೪: ವರ್ತಮಾನದ ಜಗತ್ತಿನಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಸಾಧನೆ ಸಾಮರ್ಥ್ಯವನ್ನು ತೋರುತ್ತಿರುವುದಕ್ಕೆ ಕಾರಣ  ಶಿಕ್ಷಣ ಕ್ಷೇತ್ರದಲ್ಲಿ ಅವರು ತೋರುತ್ತಿರುವ ಧಾರಣಾ ಶಕ್ತಿ ಕಾರಣ ಎಂದು ಮಹಾನಗರ ಪಾಲಿಕೆಯ ಮಹಾ ಪೌರರಾದ ಮುಲ್ಲಂಗಿ ನಂದೀಶ್ ಹೇಳಿದರು.                                                      ಅವರು ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ‌ ಶುಕ್ರವಾರ ರಾಷ್ಟ್ರೀಯ ಸೇವಾ ಯೋಜನೆ, ಕ್ರೀಡೆ, ಸಾಂಸ್ಕೃತಿಕ , ರೇಂಜರ್ಸ, ಚಟುವಟಿಕೆಗಳ ಉದ್ಘಾಟನೆ ಮತ್ತು ಪ್ರಥಮ‌ ಪಿಯುಸಿ ವಿದ್ಯಾರ್ಥಿಗಳಿಗೆ  ಏರ್ಪಡಿಸಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು.  ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಕೂಡ ಉತ್ತಮ ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ. ವಿದ್ಯಾರ್ಥಿಗಳು ತರಗತಿ ಪಠ್ಯದ ಜೊತೆ ಪೂರಕ ಪುಸ್ತಕಗಳನ್ನು ಓದಿ ಹೆಚ್ಚು ಜ್ಞಾನ ಪಡೆಯಲು ಸಲಹೆ ನೀಡಿದರು.
ಮಹಾನಗರ ಪಾಲಿಕೆ ಸದಸ್ಯರಾದ ಈರಮ್ಮ ಸುರೇಂದ್ರ ಅವರು ಮಾತನಾಡಿ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಓದುತ್ತಿರುವ ಮಕ್ಕಳು ಬದುಕಿನ ಕಷ್ಟ ಸುಖಗಳನ್ನು ಸರಿಯಾಗಿ ಅರಿತಿರುತ್ತಾರೆ.  ಶಿಕ್ಷಣವೇ ಆಧಾರವೆಂದು ಮನಸಿಟ್ಟು ಓದುವ ಕಾರಣ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸ್ಥಾನ ಪಡೆದು ನೌಕರಿ ಗಿಟ್ಟಿಸಿಕೊಂಡಿದ್ದಾರೆ ಎಂದರು.                      ವಿಶೇಷವಾಗಿ ಬಾಲಕಿಯರು ಈ ಹೊತ್ತಿನಲ್ಲಿ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಂಡು ಶಿಕ್ಷಣವನ್ನು ಆಧಾರವಾಗಿಟ್ಟುಕೊಂಡು ಸಾಧನೆ ಮಾಡಬೇಕಿದೆ ಎಂದು ಹೇಳಿದರು.
ಜಿಲ್ಲಾ ಪಿ.ಯು ಉಪನ್ಯಾಸಕರ ಸಂಘದ ಅದ್ಯಕ್ಷ ಡಾ ಎಂ ರಾಜಣ್ಣ ಅವರು ಮಾತನಾಡಿ ಮಹಿಳೆಯರಿಗೆ ಶಿಕ್ಷಣ ಸಿಗಬೇಕಾದರೆ ಇತಿಹಾಸದಲ್ಲಿ ದೊಡ್ಡ ಕ್ರಾಂತಿಗಳೆ ನಡೆದಿವೆ, ಮಾತ್ರವಲ್ಲ ಜಾಗತಿಕವಾಗಿ ಮಹತ್ತರ ಬದಲಾವಣೆಗೆ ಮಹಿಳಾ ಶಿಕ್ಷಣ ಕಾರಣವಾಗಿದೆ ಎಂದು ತಿಳಿಸಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ರಾದ ಶಮೀಮಾ ಜೋಹರ್ ಮಾತನಾಡಿ,  ಕಾಲೇಜು ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಅಂಕಗಳ ಜೊತೆ ಸಂಸ್ಕೃತಿ ,ಮಾನವೀಯತೆ,ತ್ಯಾಗ,ಸಹಕಾರದಂತಹ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಕಿವಿಮಾತು ಹೇಳಿದರು.                                            ಕಾರ್ಯಕ್ರಮದಲ್ಲಿ ಕಳೆದ ವರ್ಷ ದ್ವಿತೀಯ ಪಿಯುಸಿ ಯಲ್ಲಿ ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಅದ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ‌ ಪ್ರಾಂಶುಪಾಲರಾದ ಸುಲೇಖ ಬಿ ಅವರು, ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕಾಲೇಜಿನಲ್ಲಿ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಮಾರ್ಗದರ್ಶನ ನೀಡಲಾಗುತ್ತದೆ. ಶಿಕ್ಷಣದ ಜೊತೆ ಉದ್ಯೋಗ ಮಾರ್ಗದರ್ಶನ ನೀಡಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಡಾ.ಗೋವಿಂದ ರಾಜು, ಸುರೇಂದ್ರ ಉಪಸ್ಥಿತರಿದ್ದರು.                                        ಉಪನ್ಯಾಸಕ ಶ್ಯಾಮಣ್ಣ,ಸ್ವಾಗತಿಸಿದರು. ಪಿ ಜಿ ಶಶಿಧರ ನಿರೂಪಿಸಿದವರು. ಚಾಂದ್ ಪಾಷಾ ವಂದಿಸಿದರು.            ಸಾಂಸ್ಕ್ರತಿಕ ಕಾರ್ಯಗಳನ್ನು ಉಪನ್ಯಾಸಕಿ ಜ್ಯೋತಿ ಎಚ್ ಎಂ  ನಿರ್ವಹಿಸಿದರು.                                     ನೂರಾರು ವಿದ್ಯಾರ್ಥಿನಿಯರು ನಾಡು-ನುಡಿ, ರಾಷ್ಟ್ರಭಕ್ತಿಗೆ ಪೂರಕವಾದ ಹಾಡು, ನೃತ್ಯ.ಕಿರು ನಾಟಕಗಳನ್ನು ಪ್ರಸ್ತುತ ಪಡಿಸಿದರು.