ಅನುದಿನ ಕವನ-೧೩೩೧, ಹಿರಿಯ ಕವಿ: ಎಂ.ಎಸ್. ರುದ್ರೇಶ್ವರಸ್ವಾಮಿ, ಬೆಂಗಳೂರು, ಕವನದ ಶೀರ್ಷಿಕೆ: ಅದೇ ಧ್ಯಾನ…

ಅದೇ ಧ್ಯಾನ…

ಈ ಮರಗಳನ್ನು ಕಂಡರೆ ನನಗೆ
ಅಸೂಯೆ, ಅಂದೆ. ಅವಳು ನನ್ನತ್ತ ನೋಡಿದಳು.

ಮರಗಳಲ್ಲೂ ಗಂಡುಮರ
ಹೆಣ್ಣುಮರ ಇರುತ್ತವೆ,
ನೆಲದಲ್ಲಿ ಬೇರು ಬಿಟ್ಟ ಅವು ಕೂಡುವುದಕ್ಕೆ
ಹೂ ಬಿಡುತ್ತವೆ, ಅಂದೆ.

ಅವಳು ಹೂವುಗಳನ್ನು ದಿಟ್ಟಿಸಿದಳು
ದುಂಬಿಗಳು ಬೀಜಗಳನ್ನು ಬಿತ್ತುತ್ತಿದ್ದವು.

ಸೌಂದರ್ಯ ಇರುವಲ್ಲಿ
ಲೈಂಗಿಕತೆ ಇರುತ್ತದೆ, ಅಂದೆ.
ಅವಳು ನನ್ನತ್ತ ನೋಡುತ್ತ ‘ಸದಾ-ಶಿವನಿಗೆ
ಅದೇ ಧ್ಯಾನ’, ಅಂದಳು.

ನಾನು ನೀನು ಒಂದಾಗುವುದು, ಅಂದರೆ,
ಅಂದೆ. ಅವಳು ಮಾತಾಡಲಿಲ್ಲ
ಅವಳ ತುಟಿ ಮಾತಾಡಿದವು
ದೀರ್ಘ ಚುಂಬನಕ್ಕೆ ಅಣಿಯಾಗುತ್ತ,

‘ಬಾ, ಕುಡಿಯೋಣ-
ಈ ದೇಹದ ವೈನನ್ನು
ನಾನು ನಿನ್ನದನ್ನು ನೀನು  ನನ್ನದನ್ನು.
ಯಾವ ವೈನಲ್ಲೂ
ಇಲ್ಲದ ಮುತ್ತಿನ ಮತ್ತನ್ನು
ಮತ್ತು…’


-ಎಂ.ಎಸ್. ರುದ್ರೇಶ್ವರಸ್ವಾಮಿ, ಬೆಂಗಳೂರು
——