ಅನುದಿನ ಕವನ-೧೩೩೩, ಕವಿ: ಟಿ.ಪಿ.ಉಮೇಶ್, ಹೊಳಲ್ಕೆರೆ, ಕವನದ ಶೀರ್ಷಿಕೆ:ಖಾಲಿಯೊಳಿದೆ ಜಗದೆಲ್ಲ ಬಯಲೆ

ಖಾಲಿಯೊಳಿದೆ ಜಗದೆಲ್ಲ ಬಯಲೆ

ನಾನೆಂದು ಖಾಲಿ ಹಾಳೆಯಾಗಿದ್ದೆ
ನೀ ಬರುವವರೆಗೆ
ಅದೆಷ್ಟು ಕಲೆಗಾರರ ಕೈ ಹಿಡಿತದಿಂದ ಪಾರಾಗಿ ಕೂತಿದ್ದೆ
ನನ್ನ ಚಿತ್ರಿಸಿ ತೋರಬಲ್ಲವರಿಗಾಗಿ ಕನವರಿಸಿದ್ದೆ
ನೀನೂ…
ನಿನ್ನನ್ನೇ ಬಿಡಿಸಿ ಬಣ್ಣ ಬಣ್ಣ ತುಂಬಿದೆ
ಕಟ್ಟಿನ ಮೂಲೆಯಲೊಂದು ಓರೆ ಸಹಿ ಹಾಕಿ
ಮೊಳೆಗೆ ನೇತು ಹೊಡೆದೆ
ಈಗ
ಕಂಡ ಕಂಡವರ ಕಣ್ಣಿಗೆಲ್ಲ ಬಣ್ಣವಾದೆ
ಕೊಂಡವರ ಬದುಕಿಗೆಲ್ಲ ಬೆಲೆಯಾದೆ
ಇದ್ದ ಖಾಲಿತನವ ಕಳೆದುಕೊಂಡು ಕಲೆಯಾದೆ
*
ಈ ಗೆರೆ ಓರೆ ಬಣ್ಣ ಬಳುಕು ಏರು ಇಳಿವು
ಈ ಅಂಚು ಕುಂಚು ಈ ಚೂಪು ಒನಪು
ನನ್ನವಲ್ಲ ಅಂದುಕೊಳ್ಳುವಾಗಲೆಲ್ಲ
ಬಿಕ್ಕಳಿಸುತ್ತೇನೆ
ನನ್ನತನವ ಮಾರಿಕೊಂಡದ್ದಕ್ಕಾಗಿ ಶಪಿಸಿಕೊಳ್ಳುತ್ತೇನೆ
ನೀ ಕೈ ಬಿಟ್ಟಂದಿನಿಂದ ಬಣ್ಣ ಬಣ್ಣ
ಕಳಚುತ್ತಿದ್ದೇನೆ
ಕಂಡ ಕಣ್ಣುಗಳ ಉರಿ ನೋಟಕೆ
ಬಿಳಚುತ್ತಿದ್ದೇನೆ
*
ಮತ್ತೆ ಖಾಲಿ ಹಾಳೆಯಾಗಿ ನಿನ್ನ ಬಳಿ ಬಂದು ಕೈ ಸೋಕಲು ಕಾಲ ಸವೆಸುತ್ತಿದ್ದೇನೆ
ನಿನ್ನ ಮೃದು ಅಗಾಧ ಗಂಧ ಘಮಲಿನ ಬಣ್ಣಗಳಲಿ ಮೀಯಲು ತವಕಿಸುತ್ತಿದ್ದೇನೆ
*
ನಿನ್ನ ಬಂಧವಿರದ ಬಣ್ಣಗಳು ಬೇಡ
ನೀನಿರದ ಈ ನಾನು ಬೇಡ
*
ಜನ್ಮ ಜನ್ಮದ ತಪವೋ
ನಿನ್ನ ಬಳಿ ಬಂದೆ ಬಣ್ಣ ತೊಳೆದುಕೊಂಡು
ನೀನಿಲ್ಲಿ ಮತ್ತಾರದೋ ಹಾಳೆಯ ಮೇಲೆ ಕನಸುಗಳ ಚೆಲ್ಲುತ್ತಿದ್ದೀಯ
ಅವರ ಒಲವಿಗೆ ಕುಂಚ ಕುಣಿಸುತ್ತಿದ್ದೀಯ
*
ನನ್ನಂತೆ ಬಣ್ಣಗಳ ಸಂಗ ತೊರೆದ
ಮಾಸಿದ ಖಾಲಿ ಹಾಳೆಗಳ ಸರದಿ ಸಾಲು
ನಿನ್ನ ಮನೆಯ ಮುಂದೆ
*
ನಿನ್ನ ನೀ ಬದುಕಿಸಿಕೊಳ್ಳಲು ಎಷ್ಟೊಂದು ಖಾಲಿತನಗಳ ಕೊಂದೆಯಲ್ಲ
*
ಮತ್ತೆ ಖಾಲಿ ಹಾಳೆಯಾಗಬಾರದು
ಒಮ್ಮೆ ಕಲೆಯಾದ ಮೇಲೆ
*
ಕಲೆಗಾರನಿಲ್ಲದ ಕಲೆ ಉಳಿಯಬಾರದು
ಕಲೆಗಾಗಿ ಬಣ್ಣ ಚೆಲ್ಲುವ ಕಲೆಗಾರರ ಖಯಾಲಿಗಳಿಗೆ
ಖಾಲಿ ಖಾಲಿ ಹಾಳೆಯಾಗಬಾರದು
*
ಎಂದೂ ಖಾಲಿಯಾಗಿ ಉಳಿಸದ ಕಲೆಗೆ ಕೈ ನೀಡಬಾರದು
ಇನ್ನು ಖಾಲಿಯಾಗಲು ಬಿಡದ ಕುಂಚಕೆ
ಮೈ ಕೊಡಬಾರದು
*
ಕಲೆಯಾಗುವುದು ಖಾಲಿತನದ ಕೊಲೆಯಾದ ಮೇಲೆ
ಖಾಲಿ ಹಾಳೆಯಾಗಿರುವುದೇ ಪರಿಶುದ್ಧ ಕಲೆ
ಬನ್ನಿರಿ ಕಾಣಿರಿ
ನನ್ನ ಖಾಲಿಯೊಳಿದೆ ಜಗದೆಲ್ಲ ಬಯಲೆ

-ಟಿ.ಪಿ.ಉಮೇಶ್, ಹೊಳಲ್ಕೆರೆ