ಅನುದಿನ ಕವನ-೧೩೩೪, ಕವಯಿತ್ರಿ: ಡಾ. ಎಚ್. ಎಸ್. ಅನುಪಮಾ, ಕವಲಕ್ಕಿ, ಉತ್ತರ ಕನ್ನಡ

ಲೋಕವೇ ತಣ್ಣಗಾಗು
ಮಲಗಿಸಬೇಕು ಶಿಶುವನ್ನು.
ಕಾಣಬೇಕು ಅದು
ಬಣ್ಣಿಸಲಾಗದ ಕನಸುಗಳನ್ನು.
ನಂಬಬೇಕು ಲೋಕ
ತಾನರಿಯಲಾರದ
ಶಿಶು ಕಂಡ ಕನಸುಗಳನ್ನು

ಉಬ್ಬಿದೆದೆಯ ನಾಯಕನೇ
ನಿಲಿಸು ನಿನ್ನ ಉದ್ದುದ್ದ
ಪೊಳ್ಳು ಭಾಷಣಗಳನ್ನು.
ಕೇಳಿಸಬೇಕು ಮಗುವಿಗೆ
ಪ್ರೇಮ ರಾಗದ ಮಟ್ಟುಗಳನ್ನು,
‘ಲಿಂಗ ಮೆಚ್ಚಿ ಅಹುದಹುದೆನುವ’
ನಿತ್ಯ ಸತ್ಯ ಸೊಲ್ಲುಗಳನ್ನು

ಲೋಗರೇ ನಿಲ್ಲಿ
ಹಗ್ಗ ಕಂಬ ಕಲ್ಲನೈತಂದು
ಗೋಡೆ ಬೇಲಿಗಳನೆಬ್ಬಿಸಬೇಡಿ
ಇದು ಇದೇ ಎಂದು ಕೂನ ಹಿಡಿದು
ಯಾವ ಅಂಕಿತವನೂ ಬರೆಯಬೇಡಿ

ಇದು ‘ಸೂರ್ಯ’ ಶಿಶು
ಆಡಲಿ ಸ್ವತಂತ್ರವಾಗಿ
ಸೂರ್ಯನಂತೆ..
ಜಗದ ಮೂಲೆಮೂಲೆಗಳ
ತಡಕಿ ಹುಡುಕಿ ಹೊಕ್ಕು ಬರಲಿ
ಲೋಕ ಮಿಡಿತ ಪ್ರಾಣದುಸಿರಾಗುವಂತೆ..
ಬೆಳೆಯಲಿ ಚಣಚಣಕು
ನೆಲ ಮುಗಿಲುಗಳ ಸತ್ವ ಹೀರಿಕೊಳುತ
ಬೋಧಿಯಂತೆ..

– ಡಾ. ಎಚ್. ಎಸ್. ಅನುಪಮಾ, ಕವಲಕ್ಕಿ, ಉತ್ತರ ಕನ್ನಡ
—–