ಅನುದಿನ ಕವನ-೧೩೩೬, ಕವಿ: ಚಾಮರಾಜ ಸವಡಿ, ಕೊಪ್ಪಳ, ಕವನದ ಶೀರ್ಷಿಕೆ:ನಾನೂ … ಆಗಿದ್ದೆ

ನಾನೂ … ಆಗಿದ್ದೆ

ಬದುಕಿನ ಜಂಜಡಗಳಲ್ಲಿ
ಮುಳುಗಿಹೋಗುವ ಮುನ್ನ
ನಾನೂ ಕವಿಯಾಗಿದ್ದೆ

ಅಕ್ಷರಗಳನ್ನು ಅನ್ನ
ಕಿತ್ತುಕೊಳ್ಳುವ ಮುನ್ನ
ನಾನೂ ಕತೆಗಾರನಾಗಿದ್ದೆ

ತಿಂಗಳ ಖರ್ಚಿನ ಒತ್ತಡ
ನೆಮ್ಮದಿ ಕಸಿಯುವ ಮುನ್ನ
ನಾನೂ ಕನಸುಗಾರನಾಗಿದ್ದೆ

ಏನೋ ಆಗಲು ಹೋಗಿ
ಇನ್ನೇನೂ ಆಗಿಹೋಗಿ
ಬದುಕಿನ ತಿರುವಿನಲ್ಲಿ
ಕಕ್ಕಾವಿಕ್ಕಿಯಾಗಿ ನಿಲ್ಲುವ ಮುನ್ನ
ನಾನೂ ಆಗಿದ್ದೆ
ಕನಸುಕಂಗಳ ಯುವಕ

ಅರ್ಧ ಬದುಕಿನ ನಂತರ, ಈಗ
ತಣ್ಣಗೇ ಕೂತು ಯೋಚಿಸಿದಾಗ
ಕೊಂಚ ನೆಮ್ಮದಿ, ಕೊಂಚ ಬೇಗುದಿ
ಏನೋ ಆಗಬೇಕಿತ್ತು ಎಂಬ ಹಳಹಳಿ

ಅಂದುಕೊಂಡಿದ್ದವುಗಳಲ್ಲಿ ಅರ್ಧ
ಅಂದುಕೊಂಡಿರದವುಗಳಲ್ಲಿ ಇನ್ನರ್ಧ
ಬದುಕಿನ ಹಾಳೆ ಹರಿದುಹಂಚಿ
ಮಿಕ್ಕಿದ್ದರಲ್ಲಿ ಉಳಿದಿದೆ-

ಧ್ಯಾನ
ಮತ್ತು
ಪ್ರಾಣ!

-ಚಾಮರಾಜ ಸವಡಿ, ಕೊಪ್ಪಳ