ಅನುದಿನ‌ ಕವನ-೧೩೩೭ ಕವಿ: ಡಾ.ದಸ್ತಗೀರಸಾಬ್ ದಿನ್ನಿ, ಬಳ್ಳಾರಿ, ಕಾವ್ಯ ಪ್ರಕಾರ: ಗಜಲ್

ಗಜಲ್

ತುಟಿಯಿಂದ ಜಾರಿದ ಮಾತೊಂದು ಬೆಂಕಿ ಹಚ್ಚಿತು
ಕಣ್ಣಿನ ಬಿನ್ನಾಣದ ನೋಟವೊಂದು ಬೆಂಕಿ ಹಚ್ಚಿತು.

ಗೋಸುಂಬಿಗಳ ಬಡಿವಾರದ ಮಸಲತ್ತು ತಾಂಬೂಲವ ನಾಚಿಸಿತು
ಉಕ್ಕಿದ ಫಳ್ಳನೆಯ ನಗುವೊಂದು ಬೆಂಕಿ ಹಚ್ಚಿತು.

ನೀರನು ಸೋಸಿ ರಕ್ತವನು ಹಾಗೇ ಕುಡಿವ ಕಾಲವಿದು
ಪ್ರೀತಿ ಉಣಿಸಿದ ಕೈಯೊಂದು ಬೆಂಕಿ ಹಚ್ಚಿತು.

ಯಾರದೋ ದಾಳಕೆ ಹೂವಿನ ಗುಡಿಸಲು ಉರಿದು ಹೋಯಿತು
ಅನುಗಾಲ ನಂಬಿದ ನೆರಳೊಂದು ಬೆಂಕಿ ಹಚ್ಚಿತು.

‘ದಿನ್ನಿ ‘ಗಾಯಕೆ ಉಪ್ಪು ಸವರುವುದೇ ಖುಷಿಯ ಕೆಲಸವೀಗ
ಪೊರೆವ ಮಂಜಿನ ಒಡಲೊಂದು ಬೆಂಕಿ ಹಚ್ಚಿತು.


-ಡಾ.ದಸ್ತಗೀರಸಾಬ್ ದಿನ್ನಿ, ಬಳ್ಳಾರಿ
—–