ಅನುದಿನ ಕವನ-೧೩೩೯, ಕವಿ: ಶಂಕರ ಎನ್ ಕೆಂಚನೂರು, ಕುಂದಾಪುರ

ಅವಳು ಪ್ರತೀ ಭೇಟಿಗೂ ಒಂದು ಗಾಯದ ಜತೆ ಬರುತ್ತಿದ್ದಳು
ತೋರಿಸಿ ಅಳುತ್ತಿದ್ದಳು
ಸಮಾಧಾನ ಮಾಡಲು ಬರದ ನಾನು
ನನ್ನದೇ ಗಾಯಗಳನ್ನು ತೋರಿಸುತ್ತಿದ್ದೆ
ಅವಳು ನನ್ನ ಗಾಯಗಳನ್ನು ನೋಡಿ
ಅದರ ಮುಂದೆ ತನ್ನ ಗಾಯ ಏನೂ ಅಲ್ಲವೆಂದು ಸಮಾಧಾನ ಮಾಡಿಕೊಳ್ಳುತ್ತಿದ್ದಳು
ಮತ್ತೆ ನನ್ನ ತಲೆ ಸವರಿ ಸಮಾಧಾನಿಸುತ್ತಿದ್ದಳು

ಅವಳು ಮತ್ತೆ ಮತ್ತೆ ಹೊಸ ಗಾಯದೊಂದಿಗೆ ಬರಲಾರಂಭಿಸಿದಳು
ಈಗೀಗ ನನಗೆ ಗಾಯಗಳಾಗುತ್ತಿರಲಿಲ್ಲ
ಅವಳಿಗೆ ತೋರಿಸಲು ನನ್ನಲ್ಲಿ ಗಾಯಗಳಿರಲಿಲ್ಲ
ಅವಳು ಸಿಡಿಮಿಡಿಗೊಂಡಳು
ತನ್ನ ಗಾಯಗಳನ್ನು ಇನ್ನಷ್ಟು ಆಳವಾಗಿಸಿಕೊಂಡಳು
ಅವಳ ಅಸಹನೆ ನೋಡಲಾಗದೆ
ಅವಳಿಲ್ಲದ ವೇಳೆಯಲ್ಲಿ
ನನಗೆ ನಾನೇ ಗಾಯ ಮಾಡಿಕೊಂಡೆ
ಅವಳು ಸಮಾಧಾನಗೊಂಡಳು…

ಈಗ ಅವಳ ಗಾಯಗಳು ಮಾಗಿವೆ
ನಾನೇ ಮಾಡಿಕೊಂಡ ಗಾಯಗಳು ಕೊಳೆಯುತ್ತಿವೆ
ಮತ್ತು ಈಗೀಗ ನನಗೆ ಗಾಯ ಮಾಡಿಕೊಳ್ಳುವುದೊಂದು ಅಭ್ಯಾಸವಾಗಿದೆ


-ಶಂಕರ ಎನ್ ಕೆಂಚನೂರು, ಕುಂದಾಪುರ
—–