ಅನುದಿನ ಕವನ-೧೩೪೦, ಕವಯಿತ್ರಿ: ರೇಣುಕಾ ರಮಾನಂದ, ಅಂಕೋಲ, ಉತ್ತರ ಕನ್ನಡ, ಕವನದ ಶೀರ್ಷಿಕೆ:ಸಾಕಾಗಿದೆ ಅರಬ್ಬೀ ಕಡಲಿಗೆ..

ಸಾಕಾಗಿದೆ ಅರಬ್ಬೀ ಕಡಲಿಗೆ..

ಇಳಿ ಸಂಜೆ ಇಳಿದು ಬೆಸ್ತರ ಕೇರಿಗೆ ಸರಿದರೆ
ಮೀನು ತುಂಬುವ ಸದ್ದು
ಗರಿಮುರಿ ಬಿಸಿಲಿಗೆ ಒಣಗಿ
ಚರಚರ
ಆಪ್ತ ಪರಿಮಳ
ದಂಡೆಬಿಟ್ಟು ಸೂರ್ಯನ ಬಳಿಗೆ
ಎದ್ದೆನೋ ಬಿದ್ದೆನೋ ಎಂದೋಡುವ
ಸಮುದ್ರ
ಬಂದು ಬಂದು ಕಿರುಚಿ
ಹೊಂಯಿಗೆಯಲಿ ಧುಮ್ಮಿಕ್ಕಿ
ಹೋ… ನಗುವ ಮಕ್ಕಳ ಚಿಪ್ಪಿಯಾಟ
ಧೂಮ್ ಸಾಯಿಲಿಯೋ
ನೊರೆ ನೀರ ತೋಕಾಟ

ಅಲಲೆ ಕಸ್ತೂರಿ
ಇಂದು ಎಂಥ ಮೀನು ಪಳದ್ಯವೇ..!?
ಬಂಗುಡೆ ಭೂತಾಯಿ ಬಣಗು ಏಡಿ
ಕೊನೆಗೆ ‘ಹಲಗೆ ‘
ಇದ್ಯಾವುದೂ ಇಲ್ಲವೇನೇ
ಎಲ್ಲ ಮಾರಿ ಬಂದು ಒಣಸೀಗಡಿ ಕುದಿಸಿ
ದುಡ್ಡು ಮಾಡಲು ಹಣಕಿಯೇ..?
ಬೆಳಗಾದರೆ ಅಂವ ಕಡಲಿಗೆ ಇಳಿವವ
ದುಡಿವ ಗಂಡಸಿಗೆ ತಾಸುಗಟ್ಟಲೆ ನಿಂತು
ಬಲೆಯಿಂದ
ಒಂದೊಂದೇ ಮೀನು ಬಿಡಿಸಲು ತಾಕತ್ತು ಬೇಕು
ಹಿಂಗಾದರೆ ಹೆಂಗೇ..?

ಕಾದ ಸಿಮೆಂಟುರೋಡಿಗೆ ಒಣಗುಚಟ್ಟು
ಸಿಗಿದು ಉಪ್ಪು ಹಾಕಿದ ಶಾರ್ಕು
ಜೋಡಿಗೆ ಎರಡು ಸಾವಿರ
ನಮಗಾದರೆ ಹೊಂದಿಸಿ ಒಂದೂವರೆಗೆ
ಕೊಡಬಹುದು
ಕಮ್ಮಿ ಇಲ್ಲ
ಇಡೀ ಮಳೆಗಾಲಕ್ಕೆ ಸಾಕಾಗುತ್ತದೆ
ಅವರೂ
ದೋಣಿಗೆ ಗೇರು ಎಣ್ಣೆ ಬಳಿದು ದಂಡೆಗೆಳೆದು
ಮಡಲು ಹೊದಿಸಬೇಕು
ಮೂರು ತಿಂಗಳು ಅರೆಹೊಟ್ಟೆ
ಸಣ್ಣ ಮೀನಿಗೇ ಹೊಂದಿಕೊಳ್ಳಬೇಕು

ಚಾದುಕಾನಿನ ಕಟ್ಟಿಗೆಯ ಬಾಂಕಿನ
ಕೆಳಗೊಂದು ಪುಟ್ಟ ಅಣಬೆ
ಕಿತ್ತು ಮೂಗಿಗಿಟ್ಟರೆ ‘ ಸುರಮಾ ‘ ಪರಿಮಳ
ಒರಿಜಿನಲ್ ಸಮುದ್ರದ್ದು
ಕೇಜಿಗೆ ಮುನ್ನೂರೈವತ್ತು
ಘಟ್ಟದ ಮೇಲಾದರೆ ಎಂಟುನೂರು

ಧಿಗಡದಿಮ್ಮಿ ಕಾಚಿನಬಟ್ಟೆ ಪೋರಿ
ದಿನಾ ಸಂಜೆ ಬಂಡೆ ಮರೆಗೆ ಯಾವನನ್ನೋ
ಕರ‌್ಕೊಂಡು ಬಂದು
ಪೊಟ್ಲೆ ಶೇಂಗಾದ ಹುರಬಲು ತೆಗೆಯುತ್ತ
ಗುಸುಗುಸ..  ಪಿಸಪಿಸ..
ಮೊನ್ನೆ ಅವರಿಬ್ಬರ ಹೆಣವನ್ನು ಮಹಜರು
ಮಾಡುವಾಗ ಟುವಾಲು ಮರೆತು ಬಂದ
ಪೋಲೀಸಪ್ಪನಿಗೆ
ಮೂಗು ಹಿಡಿಯಲು ಒಂದು ಆಳು ಬೇಕಾಯ್ತು
ಹತ್ತು ಮಂದಿ ಸಾಲಾಗಿ ನಿಂತರು
ಭಿಡೆ ಮಾಡಿಕೊಳ್ಳದೆ ನಾಮುಂದು ತಾಮುಂದು
ಎಂದು ಗುದ್ದಾಡಿ ಬಿದ್ದು
ಗಾಯಮಾಡಿಕೊಂಡರು

ಗೊಂದುಗೆಟ್ಟು
ರಾತ್ರೋ ರಾತ್ರಿ ಓಡಿಬಂದವರೆಲ್ಲ
ಮುಂದೆ ಹೇಗೆ..? ಎನ್ನುತ್ತ
ಇಲ್ಲಿಯೇ ಕುಳಿತೆದ್ದು ಶತಪಥ ತಿರುಗಿ
ಅಗೋ ಅಗೋ
ಮತ್ತೆಲ್ಲಿಗೋ ಎದ್ದು ಹೊರಟುಹೋಗುತ್ತಾರೆ
ಹೋಗಲಿ ಅವರು ಮತ್ತೆ ಬರದೇ
ಯಾರಿಗೆ ಬೇಕು ಇಲ್ಲದ ಮಲಾಮತಿ
” ಸಾಯಲು ಇದೇ ಪಾಸಲೆಯೇ ಬೇಕಿತ್ತು
ಈ ಬೇವರ್ಸಿಗಳಿಗೆ “-
ಕೇಳಿ ಕೇಳಿ ಸಾಕಾಗಿದೆ
ಅರಬ್ಬೀ
ಕಡಲಿಗೆ

-ರೇಣುಕಾ ರಮಾನಂದ, ಅಂಕೋಲ, ಉತ್ತರ ಕನ್ನಡ

ಪದಗಳ ಅರ್ಥ

ಗೊಂದುಗೆಟ್ಟು – ದಿಕ್ಕುತಪ್ಪಿ
ಮಲಾಮತಿ -ತೊಂದರೆ,ವಿಪತ್ತು
ಪಾಸಲೆ – ಸುತ್ತಮುತ್ತ
ಧೂಮ್ ಸಾಯಿಲಿಯೋ – ಗುಂಪಿನಲ್ಲಿ ಕೇಕೇ ಹಾಕುತ್ತ ಕುಣಿಯುವುದು
ಪೊಟ್ಲೆ ಶೇಂಗಾ – ಹುರಿದು ಕಾಗದದ ಸುರುಳಿಯಲ್ಲಿ ಕಟ್ಟಿದ ಕಡ್ಲೆಕಾಯಿ
ಹುರಬಲು – ಹುರಿದ ಕಡ್ಲೆಕಾಯಿ ಬೀಜದ ಹುರುಪೆ ( The skin)
ಹೊಂಯಿಗೆ – ಮರಳು, ರೇವೆ
ತೋಕು – ಸೋಕು
ಪಳದ್ಯ – ಸಾರು
ಹಲಗೆ – ಕಡಿಮೆ ಬೆಲೆಯ ಮೀನು
ಮಡಲು – ತೆಂಗಿನ ಗರಿ
ಸುರಮಾ – ಅಂಜಲ್ ಮೀನು
ಕಾಚಿನಬಟ್ಟೆ – ಊರಿನ ಹೆಸರು
ಧಿಗಡದಿಮ್ಮಿ – ಸೊಕ್ಕಿನ ಮಹಿಳೆ
ಭಿಡೆ – ನಾಚಿಕೆ
*****
ಮಂಗಳೂರು ವಿಶ್ವವಿದ್ಯಾಲಯದ ದ್ವಿತೀಯ ಬಿಎ/ಬಿಎಸ್ ಡಬ್ಲ್ಯು/ಹೆಚ್ ಆರ್ ಡಿ/ಬಿವಿಎ ವಿದ್ಯಾರ್ಥಿಗಳ ಚತುರ್ಥ ಸೆಮಿಸ್ಟರ್‌ನ ಕಲಾಮಂಗಳ-೪ ಪುಸ್ತಕಕ್ಕೆ ಪಠ್ಯವಾಗಿ ನನ್ನ ‘ಮೀನುಪೇಟೆಯ ತಿರುವು’ ಕವನ‌ ಸಂಕಲನದ ‘ಸಾಕಾಗಿದೆ ಅರಬ್ಬೀ ಕಡಲಿಗೆ’ ಈ ಪದ್ಯವನ್ನು ಆಯ್ದುಕೊಳ್ಳಲಾಗಿದೆ.        -ರೇಣುಕಾ ರಮಾನಂದ
——