ಅನುದಿನ‌ ಕವನ-೧೩೪೪, ಕವಯಿತ್ರಿ: ಶೋಭ ಮಲ್ಕಿ ಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಗುರುವೇ ನಮಃ

ಗುರುವೇ ನಮಃ

 

ಶಿಲೆಯನ್ನೇ ಕಲೆಯಾಗಿಸುವ
ಅದ್ಭುತ ಶಿಲ್ಪಿಗೆ
ಮರೆಯಲ್ಲಿ ಮಹೋನ್ನತಿ
ಮೆರೆಯುವ ತಮ್ಮ ಜಾಣಾಕ್ಷತನ
ನಿಜಕ್ಕೂ ಅತ್ಯದ್ಭುತ |

ಶಿಕ್ಷಕ ಸಮೂಹಕ್ಕೆ
ನಮೋ ನಮಃ
ಸರಿಸಾಟಿಯಾಗಿಲ್ಲ
ತಮ್ಮ ವಿನಹ |

ಮಗುವಿಗೆ ಹಿರಿತನ ತುಂಬುವ
ಜಾಣ್ಮೆ ತಮ್ಮದು
ಪರುಷಮಣಿ ಶಕ್ತಿ ನೀವು
ಗುರುವಿನ ಹಿರಿಮೆಯದು |

ಮಕ್ಕಳೊಳಗೊಂದಾಗಿ
ಲೀನಗೊಳ್ಳುವ ತಮ್ಮ ತಲ್ಲೀನತೆಗೆ
ತಾದಾತ್ಮ್ಯ ಎಲ್ಲಿಹುದು
ಲಿಂಗವೂ ಮೆಚ್ಚಿ ತಾನೆನ್ನಬೇಕು
‘ಅಹುದು ಅಹುದು’ |

ಚಿಲಿಪಿಲಿ ಚಿನ್ನರಿಗೆ ತುಂಬುವಿರಿ
ನೀವು ಅದಮ್ಯ ಚೈತನ್ಯ
ತಮ್ಮ ನಿಷ್ಕಳಂಕ ಪ್ರೀತಿಗೆ
ಜಗ ತೋರುವುದು ಮಾನ್ಯ |

ಜ್ಞಾನಿಗಳು, ವಿಜ್ಞಾನಿಗಳು,
ಅಭಿಯಂತರರು, ವೈದ್ಯರು
ತಮ್ಮಿಂದಲೇ ಸೃಷ್ಟಿ ಈ ಜಗದಿ
ಮಕ್ಕಳ ಬೆಳವಣಿಗೆಗೆ
ನೀವೇ ಭದ್ರ ಬುನಾದಿ |

-ಶೋಭಾ ಮಲ್ಕಿ ಒಡೆಯರ್, ಹೂವಿನ ಹಡಗಲಿ