ಅವಳ ಹೆಜ್ಜೆ
ನಿನ್ನ ಹೆಜ್ಜೆಗಳಿಗೇನು
ಅವಸರವಿತ್ತು ?
ನನ್ನ ಹೃದಯದ ಬಾಗಿಲು
ದಾಟಿ ಹೋಗಿಬಿಟ್ಟವು
ಇದೀಗ ಒಂಟಿ ನಕ್ಷತ್ರದೊಂದಿಗೆ
ಬಾಗಿಲಲಿ ಒಂಟಿಯಾಗಿ
ಕುಳಿತ ನಾನು
ನೀ ನಡೆದ ಹೆಜ್ಜೆಗಳಲಿ
ಕೆಂಡದಂತೆ ಅರಳುತಿರುವ
ಹೂಗಳನೇ ನೋಡುತಿರುವೆ !
ಕತ್ತಲಲಿ ಅಗ್ನಿಜ್ವಾಲೆಗಳಾಗಿ
ಉರಿಯುತಿರುವ ಈ ಹೂಗಳ
ಬೇಗೆಯನ್ನು ಹೇಗೆ ತಾನೆ ಸಹಿಸಲಿ ?
ಇನ್ನೂ ಹುಟ್ಟದ ನಾಳೆಯ
ಸೂರ್ಯನ ನೆನೆದೇ
ಬೆಚ್ಚುತಿರುವ ನಾನು
ಕೆಂಡದ ಈ ಹೂಗಳ
ಹೇಗೆ ತಾನೆ ಎದುರಿಸಲಿ ?
ತೆಪ್ಪಗೆ ಅಂಗಾತ ಬಿದ್ದಿರುವ
ನೀಳ್ದಾರಿಯೂ ಹೇಳುತಿದೆ
ಅವಳಿನ್ನು ಮರಳುವುದಿಲ್ಲವೆಂದು
ಆದರೂ ದಿಗಂತದವರೆಗೂ
ಚಾಚಿರುವ ದಾರಿಯ ಅಂಚನ್ನೂ
ಆಸೆಗಣ್ಣಿಂದ ನೋಡುತಲೇ ಇರುವೆ
ಮತ್ತೆ ಆ ಸುಂದರ ಹೆಜ್ಜೆಗಳು
ಮರಳಬಹುದೆಂದು
ನಾಳಿನ ಸೂರ್ಯ ತಂಪೆರೆಯಬಹುದೆಂದು !
ಕಾಯುತ್ತಲೇ ಇರುವೆ
ಸುರುಳಿ ಬಿಚ್ಚುತಿರುವ
ಇರುಳ ಹೆರಳುಗಳಲಿ
ನನ್ನ ಜೊತೆಯಲ್ಲಿಯೇ
ಕಾತರದಿಂದ ಕಾಯುತಿರುವ
ನೀರವತೆಯಲಿ –
ನನ್ನಲ್ಲೀಗ ಉಳಿದಿರುವುದು
ನಿರೀಕ್ಷೆಯನು ಹೊತ್ತ
ಎರಡು ಕಂಗಳ ದೀಪಗಳು ಮಾತ್ರ
ದೇಹವಲ್ಲದ ದೇಹವೆಂಬ
ಮೆಟ್ಟಿಲುಗಳು ಮಾತ್ರ !
-ಸಿದ್ಧರಾಮ ಕೂಡ್ಲಿಗಿ
—–