ದೂರದೂರುಗಳ ದಾರಿಯಲ್ಲಿ ಸಾಗುವಾಗ
ದೂರದೂರುಗಳ ದಾರಿಯಲ್ಲಿ ಸಾಗುವಾಗ
ನಿರಾಶೆಯ ಹಾಡುಗಳನು ಹಾಡುವುದಿಲ್ಲ ನಾನು
ರಟ್ಟೆಗಳಿಗೆ ರೆಕ್ಕೆ ಮೂಡಿಸುವುದು
ಸುಳಿವ ಆಹ್ಲಾದಕರ ಗಾಳಿ
‘ನನ್ನ ಉಸಿರು ಅಲ್ಲಿದೆ
ನಾನು ಕೊಟ್ಟಿದ್ದೆಂಬುದು ಏನೂ ಇಲ್ಲ,ಪಡೆದುದೇ ಎಲ್ಲ’
ಅರಿವಿನ ಮಿಂಚೊಂದು ಹಾದುಹೋಗುವುದು
ರೈಲು ಬಂಡಿಯ ವೇಗ ಸೇರಿಕೊಳ್ಳುವುದು ಎದೆಯೊಳಗೆ
ಕ್ಷಣ ಕ್ಷಣವೂ ಉಕ್ಕುಕ್ಕಿ ಸರಿದು ಹೋಗುವ ಹಸಿರು
ತುಂಬಲಾರದು ಬೇರೇನನು,ಸಿರಿ ತಂಪನ್ನಲ್ಲದೆ
ಕೂಡಿಹಾಕಲಾಗದು ಹಸಿರಿನ ಕೆನೆತವನು
‘ಕಟ್ಟಿ ಹಾಕದೆ ಬಿಟ್ಟುಬಿಡುವುದೆ
ಎಲ್ಲ ಖುಷಿಯ ಕಾರಣ’
ಸುಳಿಯುವುದು ಚಿನ್ನದ ಗೆರೆಯಂತಹ ಭಾವವೊಂದು
ಹೆಚ್ಚುತ್ತಲೇ ಹೋಗುತ್ತಿತ್ತು ನಡಿಗೆಯ ವೇಗ
ತುಂಬಿಕೊಳ್ಳುತ್ತಿತ್ತು ತನ್ಮತೆಯ ಆವೇಗ
ಚಿಗುರೊಡೆವ ಸುಳಿ ನಾನೇ ಆಗಿ
ಬಂಡೆಗಳೆಡೆಯ ಝರಿಯ ಸದ್ದಿಗೆ ಕಿವಿ ಕಾತರಿಸಿ
ಮೈದುಂಬುವ ಹೂವುಗಳ ಹಾಡಿಗೆ ಮನ ತೆರೆದು
ಸರಿಯಾಗಿಯೇ ಉಹಿಸಿದ್ದೀರಿ ನೀವು:
ಅಲ್ಲಿ ಇರುವುದಿಲ್ಲ ತುಳಿವ ಕಾಲುಗಳು
ಕಿಡಿ ಕಾರುವ ಕೇಡಿ ಕಣ್ಣುಗಳು
ಕುರುಡು ಭಕ್ತಸಂದಣಿ
ಅಕಾರಣ ಉಕ್ತಿಗಳ ಘೋರ ಪ್ರಪಾತ
ಎನ್ನುವಾಗಲೂ ನುಗ್ಗಬಹುದಲ್ಲಿಗೆ ಅವರು ಯಾವುದೇ ಕ್ಷಣ!
ನಿರಾಶೆಯ ಹಾಡುಗಳನ್ನು ಹಾಡುವುದಿಲ್ಲ ನಾನು
ದೂರದೂರುಗಳ ದಾರಿಯಲ್ಲಿರುವಾಗ
-ವಸಂತ ಬನ್ನಾಡಿ, ಬೆಂಗಳೂರು
—–