ಹೊಸಪೇಟೆ (ವಿಜಯನಗರ) ಸೆ. 11: ನೂತನ ವಿಜಯನಗರ ಜಿಲ್ಲೆಯಲ್ಲಿ ಮೀನುಗಾರಿಕೆ ಇಲಾಖೆಯ ಜಿಲ್ಲಾಮಟ್ಟದ ಕಚೇರಿ ಸೃಜನೆ ಮಾಡಿರುವುದಕ್ಕೆ ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಹೆಚ್.ಆರ್.ಗವಿಯಪ್ಪ ಅವರು ಮುಖ್ಯಮಂತ್ರಿಗಳಿಗೆ ಅಭಿನಂದನೆ ತಿಳಿಸಿದ್ದಾರೆ.
ನೂತನವಾಗಿ ರಚನೆಗೊಂಡ ವಿಜಯನಗರ ಜಿಲ್ಲೆಗೆ ಈಗಾಗಲೇ ವಿವಿಧ ಜಿಲ್ಲಾಮಟ್ಟದ ಇಲಾಖೆಗಳು ಸೃಜನೆಯಾಗಿರುತ್ತವೆ. ಆದರೆ ಜಿಲ್ಲೆಯಲ್ಲಿ ಮೀನುಗಾರಿಕೆ ಇಲಾಖೆಯು ಅಸ್ತಿತ್ವದಲ್ಲಿ ಇಲ್ಲದಿರುವುದರಿಂದ ಜಿಲ್ಲೆಯ ಮೀನುಗಾರರ ಕುಂದುಕೊರತೆಗಳ ಬಗ್ಗೆ ಬಳ್ಳಾರಿಯ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿತ್ತು. ಇದರಿಂದ ವಿಜಯನಗರ ಜಿಲ್ಲೆಯ ಮೀನುಗಾರರು ತೊಂದರೆ ಅನುಭವಿಸುತ್ತಿದ್ದರು. ನಮ್ಮ ಜಿಲ್ಲೆಯು ತುಂಗಭದ್ರಾ ನದಿಯು ಸೇರಿದಂತೆ ಆಣೆಕಟ್ಟನ್ನು ಒಳಗೊಂಡಿರುವುದರಿAದ ಹೆಚ್ಚಿನ ಸಂಖ್ಯೆಯಲ್ಲಿ ಮೀನುಗಾರರು ಇರುವುದರಿಂದ ಅವರ ಕುಂದುಕೊರತೆಗಳನ್ನು ಬಗೆಹರಿಸಲು ವಿಜಯನಗರ ಜಿಲ್ಲೆಯಲ್ಲಿ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರ ಕಚೇರಿ ಅತೀ ಅವಶ್ಯವಿದೆ ಎಂದು ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರಿಗೆ ಹಾಗೂ ಮೀನುಗಾರಿಕಾ ಸಚಿವರಾದ ಮಂಕಾಳ ವೈದ್ಯ ಅವರಿಗೆ ಮನವಿ ಮಾಡಲಾಗಿತ್ತು.
ತಮ್ಮ ಮನವಿಯಂತೆ ವಿಜಯನಗರ ಜಿಲ್ಲೆಗೆ ಮೀನುಗಾರಿಕೆ ಉಪ ನಿರ್ದೇಶಕರು ಒಳಗೊಂಡು ಇನ್ನುಳಿದ ಸಿಬ್ಬಂದಿ ಸೇರಿ 05 ಹುದ್ದೆಗಳ ಸಮೇತ ಕಚೇರಿ ಸೃಜಿಸಲು ರಾಜ್ಯ ಸರ್ಕಾರವು ಆದೇಶ ಹೊರಡಿಸಿರುವದರಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ಮತ್ತು ಮಾನ್ಯ ಮೀನುಗಾರಿಕೆ ಸಚಿವರಿಗೆ ತಾವು ಹೃದಯಪೂರ್ವಕ ಅಭಿನಂದನೆ ಸಲ್ಲಿಸುವುದಾಗಿ ಶಾಸಕರಾದ ಗವಿಯಪ್ಪ ಅವರು ತಿಳಿಸಿದ್ದಾರೆ.