ಕವಿತೆಯಾಗುವ ಮುನ್ನ
ನಿನ್ನ ಕವಿತೆಗಳೆಷ್ಟು ಸರಳ, ಸಲೀಸು
ಸರಾಗ ಎನ್ನುತ್ತಾರೆ ಅವರು
ಅವೇನು ಮೆದುಳಿನಿಂದ ಬೆರಳಿಗೆ
ಸೀದಾ ನೆತ್ತರಂತೆ ಹರಿಯುವುದಿಲ್ಲ
ಒಂದು ಪದದ ಗೆಲುವಿಗೆ ಎಷ್ಟು ಪದಗಳು
ಸೋತು, ಹಿಂದೆಗೆಯಬೇಕು?
ಒಂದು ನವಿಲ ನರ್ತನದ ನಡೆಗಾಗಿ
ಅದೆಷ್ಟು ಹೆಜ್ಜೆ ತಾಳ ತಪ್ಪಬೇಕು
ಬೆಳಕಿದ್ದರೂ ಮಿನುಗದೆ, ತೋರದೆ
ಕತ್ತಲೆಗೆ ನಕ್ಷತ್ರಗಳು ಕಾಯಲೇಬೇಕು
ವಸಂತದ ಬಣ್ಣ ಬೆರಗನ್ನು ತೆರೆವ ಮುನ್ನ
ಚಳಿಗೆ ಬೋಳಾಗಿ ಮರ ನಿಲ್ಲಬೇಕು
ಒಂದು ಸುಸ್ವರ ನುಡಿಯುವ ವೀಣೆ
ಅದೆಷ್ಟು ಅಪಸ್ವರಗಳ ಕೇಳಬೇಕು
ಕವಿತೆಯಾಗುವ ಮುನ್ನ
ಬದುಕ ಹಾಳೆಯಲ್ಲೆಷ್ಟು ಚಿತ್ತು, ಕಾಟು!
-ಎಂ ಆರ್ ಕಮಲ, ಬೆಂಗಳೂರು
—–