ಯಕ್ಷ ಪ್ರಶ್ನೆ!
ಇದೆ, ಸಾವು!
ಬಿಸಿಲಲ್ಲಿ ನೆರಳಾಗಿ
ಆಚೀಚೆಯಾಗಿ
ಇರುಳಲ್ಲಿ ನಿದಿರೆಯಾಗಿ
ಹಾಸಿಗೆಯಲ್ಲಿ ಕಾಲು ಚಾಚಿ ಹಾಯಾಗಿ
ಹಸಿವಲ್ಲಿ ಜೊತೆಯಾಗಿ
ರಕ್ಕಸನ ಮಾಯೆಯಾಗಿ
ನಡೆದಿದೆ, ಮಲಗಿದೆ, ಕೂತಿದೆ, ಎದ್ದಿದೆ
ಕಾದಿದೆ…….!
ಎಲ್ಲರೊಂದಿಗೆ ನಿತ್ಯನಿರಂತರವಾಗಿ
ನಿರಾತಂಕವಾಗಿ!
ಬದುಕಿಗೆ ವಚನ ನೀಡಿದ
ಪ್ರಾಮಾಣಿಕನಾಗಿ
ಜನ್ಮದಿಂದ ಮುಕ್ತಿಯೆಡೆಗಿನ
ಪ್ರಯಾಣಿಕನಾಗಿ
ಇದೆ ಎಂದರೆ ಇದೆ
ಲೋಕದ ಕಣ್ಣಿಗೆ ಕಾಣದೆ
ಮನುಜನ ಅನುಭವಕ್ಕೆ ನಿಲುಕದೆ
ನಮ್ಮೆಲ್ಲರ ಒಳ ಹೊರಗೆ ಸುಪ್ತವಾಗಿ
ಕಾಲದ ಚಲನೆಯಾಗಿ
ಗಾಳಿಯ ರೀತಿಯಲಿ
ಮಾಯೆಯಲ್ಲ, ಮೋಡಿಯಲ್ಲ
ಯಕ್ಷಪ್ರಶ್ನೆಯಾಗಿ
ಎಲ್ಲಾ ಸಂದೇಹಗಳಿಗೆ
ಮಾರ್ಮಿಕ ಉತ್ತರವಾಗಿ
ಬಾಳಿನ ಗಮ್ಯವಾಗಿ
ಸಾವೆಂಬುದಿದೆ!
◼️-ಜಬೀವುಲ್ಲಾ ಎಮ್. ಅಸದ್, ಬೆಂಗಳೂರು
ಸೂಪರ್…. ಅರ್ಥಪೂರ್ಣ ಕವಿತೆ