ಅನುದಿನ‌ ಕವನ-೧೩೫೨, ಹಿರಿಯ ಕವಿ: ಮಹಿಮ, ಬಳ್ಳಾರಿ

ಯಾರೋ ಅನ್ನುವಂತಿದ್ದುಬಿಡು,
ಯಾರೇನೇ ಅನ್ನಲಿ
ಯಾರೋ ಅನ್ನುವಂತಿದ್ದುಬಿಡು,
ಅವರವರ ಭಾವಕ್ಕೆ ಅವರ ನಾಲಿಗೆ ಇಹುದು,
ಹೊಗಳಿಕೆಯೂ ಬೇಡ
ತೆಗಳಿಕೆಯೂ ಬೇಡ
ನೀನಾರಿಗೂ ಬೇಡವಾದವನು
ಯಾರೋ ಅನ್ನುವಂತಿದ್ದುಬಿಡು,

ಹೇ,ಮನಸೇ,
ಭ್ರಮೆಯೇನು ನಿನಗೆ?
ಹುಸಿ ಮಾತುಗಳು
ಬಿಸಿ ಬಿಸಿ ಮಾತುಗಳು
ಪಿಸು ಮಾತುಗಳು ಅವರವರಲ್ಲಿಯೇ ಖಾಸ್ ಬಾತ್ ಗಳು
ಎಲ್ಲವೂ ನಿನ್ನ ಬಗ್ಗೆಯೇ,
ಮುಂದಿದ್ದಾಗ ಒಂದು
ಹಿಂದಿದ್ದಾಗ ಒಂದು

ನಕ್ಕಂತೆ ಮಾಡಿ
ಅಳಿಸಿಬಿಟ್ಟರಲ್ಲ

ಈಗಲಾದರೂ ಯಾರೋ ಯಾರೋ ಅನ್ನುವಂತಿದ್ದುಬಿಡು
ಇಲ್ಲಿ ಯಾರಿಗೆ ಯಾರೂ ಇಲ್ಲ

ಒಂಟಿ ಆಗಮನ
ಒಂಟಿಯಾಗಿಯೇ ನಿರ್ಗಮನ
ಅವರಿಗೆಲ್ಲ ನೀನು ಯಾರೋ?
ಯಾರೋ ಅನ್ನುವಂತಿದ್ದುಬಿಡು
ಯಾರೇನೇ ಅಂದುಕೊಳ್ಳಲಿ
ಯಾರೋ ಅನ್ನುವಂತಿದ್ದುಬಿಡು..

ಆ ಕಡೆ ಈ ಕಡೆ ಓಗೊಟ್ಟು
ಬದುಕಿದ್ದಾಗಲೇ ಸತ್ತಂತಾಗಬೇಡ..
ಯಾರೋ ಅನ್ನುವಂತಿದ್ದುಬಿಡು


-ಮಹಿಮ, ಬಳ್ಳಾರಿ
—–