ಬಳ್ಳಾರಿ, ಸೆ.13: ಸರ್.ಎಂ.ವಿಶೇಶ್ವರಯ್ಯನವರ 164 ನೇ ಜನ್ಮ ದಿನಾಚರಣೆ ಅಂಗವಾಗಿ ಇಲ್ಲಿನ ಬಳ್ಳಾರಿ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಎಂಜಿನಿಯರ್ಸ್ ಆ್ಯಂಡ್ ಆರ್ಕಿಟೆಕ್ಟ್ಸ್ ಶುಕ್ರವಾರದಿಂದ ಮೂರು ದಿನಗಳ ಕಾಲ ಕಮ್ಮ ಭವನದಲ್ಲಿ ಹಮ್ಮಿಕೊಂಡಿರುವ ನಿರ್ಮಾಣ ೨೦೨೪ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಚಾಲನೆ ದೊರೆಯಿತು. ಜನರಿಗೆ ಕಟ್ಟಡಗಳ ಹೊಸ ಬಗೆಯ ಸಾಮಾಗ್ರಿಗಳ ಪರಿಚಯ ಮತ್ತು ತಂತ್ರಜ್ಞಾನದ ಬಗ್ಗೆ ತಿಳಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಪ್ರದರ್ಶನವನ್ನು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಟ್ಟಡದ ಹೊಸ ಸಾಮಾಗ್ರಿ, ತಂತ್ರಜ್ಞಾನದ ಬಗ್ಗೆ ತಿಳಿಸುವ ಈ ಪ್ರದರ್ಶನ ಸಾರ್ವಜನಿಕರಿಗೆ ಸಹಕಾರಿಯಾಗಿದೆ. ಅಸೋಸಿಯೇಷನ್ ಬಡ ಜನತೆಗೆ ಅನುಕೂಲವಾಗುವ ರೀತಿಯಲ್ಲಿ ಕಡಿಮೆ ಮೆಚ್ಚದ ಮನೆಗಳ ನಿರ್ಮಾಣಕ್ಕೆ ಮುಂದಾದರೆ ಜಿಲ್ಲಾಡಳಿತವೂ ಅಗತ್ಯ ಸಹಕಾರ ನೀಡಲಿದೆ ಎಂದರು.
ಮುಖ್ಯ ಅತಿಥಿ ಜಿಪಂ ಸಿಈಓ ರಾಹುಲ್ ಶರಣಪ್ಪ ಸಂಕನೂರ್ ಮಾತನಾಡಿ, ಈ ಜಿಲ್ಲೆಯಲ್ಲಿ ದ್ವಿತೀಯ ಪಿಯುನಲ್ಲಿ ವಿಜ್ಞಾನ ಅಭ್ಯಾಸ ಮಾಡುವುದು ಕಡಿಮೆ ಇದೆ. ಉತ್ತಮ ಇಂಜಿನೀಯರ್ ಗಳಾಗಲು ವಿಜ್ಞಾನದ ಅಭ್ಯಾಸ ಬೇಕು. ಉತ್ತಮ ತಂತ್ರಜ್ಞಾನದೊಂದಿಗೆ ಕಟ್ಟಡಗಳ ನಿರ್ಮಾಣ ನಿಮ್ಮಿಂದ ಆಗಲಿ ಎಂದು ಆಶಿಸಿದರು. ಅಸೋಸಿಯೇಷನ್ ಅಧ್ಯಕ್ಷ ಹೊಸೂರ್ ಈಶ್ವರಗೌಡ ಅಧ್ಯಕ್ಷತೆ ವಹಿಸಿದ್ದರು. ಅಸೋಸಿಯೇಷನ್ ಮಾಜಿ ಅಧ್ಯಕ್ಷ ಸಂಜೀವ್ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಚೇಂಬರ್ ಆಫ್ ಕಾಮರ್ಸ್ ಮಾಜಿ ಅಧ್ಯಕ್ಷ ಡಾ. ಡಿ.ಎಲ್. ರಮೇಶ್ ಗೋಪಾಲ್, ಅಸೋಸಿಯೇಷನ್ ಕಾರ್ಯದರ್ಶಿ ಪಿ.ಪ್ರಕಾಶ್, ಜಂಟಿ ಕಾರ್ಯದರ್ಶಿ ರಾಜೀವ್ ಮತ್ತು ಟಿ.ಆರ್.ರಾಕೇಶ್ ಇದ್ದರು. ಜಗದೀಶ್ ಪಾರ್ಥಿಸಿದರು. ಅಗಡಿ ಮಂಜೇಶ್ ಸಾಗತಿಸಿದರು.
ಪ್ರದರ್ಶನ: ಪ್ರದರ್ಶನದಲ್ಲಿ 60 ಸ್ಟಾಲ್ ಗಳಲ್ಲಿ ಪಾಲ್ಗೊಂಡಿದ್ದು ವಿನೂತನ ಬಗೆಯ ಕಟ್ಟಡ ಸಾಮಗ್ರಿಗಳ ಪ್ರದರ್ಶನ ಮತ್ತು ಮಾರಾಟ ನಡೆಯುತ್ತಿದೆ. ನಗರದಲ್ಲಿ ಮನೆ ಕಟ್ಟುವ ಜನರಿಗೆ ಇದು ಅನುಕೂಲಕಾರಿಯಾಗಿದೆ. ಗ್ರಾಹಕರಿಗೆ ಮತ್ತು ಕಂಪನಿಗಳಿಗೆ, ಮಾರಾಟಗಾರರಿಗೆ ಕೊಂಡಿಯಾಗಿ ಅಸೋಸಿಯೇಷನ್ ಪ್ರದರ್ಶನ ಆಯೋಜಿಸಿದೆ.