ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ: ಐತಿಹಾಸಿಕ ಮಾನವ ಸರಪಳಿ ಯಶಸ್ಸಿಗೆ ಎಲ್ಲರೂ ಕೈಜೋಡಿಸೋಣ -ಹೆಚ್.ಆರ್.ಗವಿಯಪ್ಪ ಮನವಿ

ಹೊಸಪೇಟೆ (ವಿಜಯನಗರ) ಸೆ. 13: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವದ ದಿನದ ಅಂಗವಾಗಿ ಸೆ. 15ರಂದು ವಿಜಯನಗರ ಜಿಲ್ಲೆಯಲ್ಲಿ ನಡೆಯುವ ಐತಿಹಾಸಿಕ ಮಾನವ ಸರಪಳಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಯುವಜನರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಎಲ್ಲ ನೌಕರ-ಸಿಬ್ಬಂದಿ ವರ್ಗದವರು, ಕೃಷಿ ಕೂಲಿ ಕಾರ್ಮಿಕರು, ಸಾಹಿತಿಗಳು, ಹೋರಾಟಗಾರರು, ಮಹಿಳೆಯರು, ಹಿರಿಯರು ಸೇರಿದಂತೆ ಪ್ರತಿಯೊಬ್ಬರು ಭಾಗಿಯಾಗಿ ಕಾರ್ಯಕ್ರಮದ ಯಶಸ್ವಿಗೆ ಕೈಜೋಡಿಸಬೇಕು ಎಂದು ವಿಜಯನಗರ ಶಾಸಕ ಹೆಚ್.ಆರ್.ಗವಿಯಪ್ಪ ಅವರು ಮನವಿ ಮಾಡಿದ್ದಾರೆ.
ಸೆ. 15ರಂದು  ಟಿ.ಬಿ. ಡ್ಯಾಮ್ ಮೊದಲನೇ ಸೇತುವೆಯಿಂದ ಗಣೇಶ ದೇವಸ್ಥಾನದವರೆಗೆ, ಸಾಯಿಬಾಬಾ ಸರ್ಕಲ್, ಬಸವೇಶ್ವರ ಸರ್ಕಲ್, ಅಪ್ಪು ಸರ್ಕಲ್, ಬಳ್ಳಾರಿ ರೋಡ್ ಸರ್ಕಲ್, ಕಾರಿಗನೂರು, ವಡ್ಡರಹಳ್ಳಿ, ಪಿ.ಕೆ.ಹಳ್ಳಿ, ಬಯಲುವದ್ದಿಗೇರಿ, ಧರ್ಮಸಾಗರ, ಗಾದಿಗನೂರು, ಭುವನಹಳ್ಳಿ ಗ್ರಾಮದವರೆಗೆ ಅಂದಾಜು 40 ಕಿಲೋ ಮೀಟರ್ ಮಾನವ ಸರಪಳಿ ಕಾರ್ಯಕ್ರಮವು ವಿಶಿಷ್ಟವಾಗಿ ನಡೆಯಲಿದೆ.
ವಿಜಯನಗರ ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಮತ್ತು ವಿವಿಧ ಇಲಾಖೆಗಳು ಈ ಕಾರ್ಯಕ್ರಮಕ್ಕೆ ಅಚ್ಚುಕಟ್ಟಾಗಿ ತಯಾರಿ ಮಾಡಿಕೊಂಡಿವೆ.‌ಭಾನುವಾರ ಪ್ರತಿಯೊಬ್ಬರು ಈ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸಂವಿಧಾನಕ್ಕೆ ಗೌರವ ಸಲ್ಲಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಶಾಸಕರು ಮನವಿ ಮಾಡಿದ್ದಾರೆ.