ಇದುವರೆಗೂ ಹುಬ್ಬು ಗಂಟಿಕ್ಕಿಕೊಂಡು, ಅಬ್ಬರಿಸುವ, ಮುಖದಲ್ಲಿ ಆಕ್ರೋಶ, ಸೇಡಿನ ಜ್ವಾಲೆ, ಕಣ್ಣಲ್ಲಿ ಕ್ರೋಧ ತುಂಬಿಕೊಂಡ ಖಳನಟರನ್ನೇ ನೋಡುತ್ತಿದ್ದ ನಮಗೆ, ತಣ್ಣಗೆ ನಗುತ್ತ, ಬೆನ್ನ ಮೂಳೆಯಲ್ಲಿ ನಡುಕ ಹುಟ್ಟಿಸುವ ಖಳನಟರನ್ನು ನಾವು ನೋಡಿರಲಿಲ್ಲ. ಇದೀಗ ಹೊಸ ಟ್ರೆಂಡ್ ಅನ್ನುವ ಹಾಗೆ ಕನ್ನಡದಲ್ಲಿ ಆ ರೀತಿ ತಣ್ಣಗೆ ನಗುತ್ತಲೇ ಖಳನಟನ ಹೊಸ ಬಗೆಯ ನಟನೆಯನ್ನು ಪರಿಚಯಿಸಿದವರು ರಮೇಶ್ ಇಂದಿರಾ ಅಂತ ಹೇಳಬಹುದು.
ಏನೇ ಅನ್ನಿ ಕನ್ನಡಕ್ಕೊಬ್ಬ ಅತ್ಯುತ್ತಮ ಖಳನಟ ದೊರಕಿದ್ದಾರೆ. ಇವರ ಸಪ್ತ ಸಾಗರದಾಚೆ ಎಲ್ಲೋ, ಕೋಟಿ ಚಲನಚಿತ್ರಗಳನ್ನು ನೋಡಿದರೆ ಇವರ ನಟನೆಯ ಸಂಪೂರ್ಣ ಪರಿಚಯವಾಗುತ್ತದೆ.
ಸಪ್ತ ಸಾಗರದಾಚೆ ಎಲ್ಲೋ ಚಿತ್ರಗಳ ಎರಡೂ ಭಾಗಗಳನ್ನು ನೋಡಿದಾಗಲೇ ಇವರಲ್ಲಿಯ ಅದ್ಭುತ ನಟನೆ ಗೊತ್ತಾಗುತ್ತದೆ. ಇಲ್ಲೆಲ್ಲ ನಗುತ್ತಲೇ ನಾಯಕನನ್ನು ಮಟ್ಟ ಹಾಕಲು ಯತ್ನಿಸುವ ಅವರ ಅಭಿನಯ ನನಗಂತೂ ಇಷ್ಟವಾಗಿಬಿಡ್ತು. ಅವರ ” ಮನೂ..” ಎಂಬ ನಗುತ್ತಲೇ ನಾಯಕನನ್ನು ಕೆಣಕುವ ನಟನೆಯನ್ನು ಯಾರು ಇಷ್ಟಪಡುವುದಿಲ್ಲ ? ಅದಕ್ಕೇ ಇವರು ಎಲ್ಲೇ ಹೋಗಲಿ ಇವರ ಅಭಿಮಾನಿಗಳು ಇವರಂತೆಯೇ ” ಮನೂ…….” ಅಂತ ಕರೆದು ಇವರನ್ನು ಮಾತನಾಡಿಸುತ್ತಾರಂತೆ.
ಖಳನಟ ಹೀಗೇ ಇರಬೇಕು ಎಂಬ ಸಿದ್ಧ ಮಾದರಿಯನ್ನು ಬದಲಾಯಿಸಿದ್ದು ರಮೇಶ್ ಇಂದಿರಾ. ಇವರ ಮೇಲ್ಕಾಣಿಸಿದ ಚಿತ್ರಗಳನ್ನು ನೋಡಿ…….. ಇವರೊಳಗಿನ ಖಳನಟನ ತಣ್ಣಗಿನ ಕ್ರೌರ್ಯವನ್ನು ಹೇಗೆ ವ್ಯಕ್ತಪಡಿಸುತ್ತಾರೆ ಎಂಬುದನ್ನು ನೋಡಬಹುದು.
-ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿ.