ಅನುದಿನ ಕವನ-೧೩೫೬, ಕವಯಿತ್ರಿ: ರೇಣುಕಾ ಎಸ್ ಮಾಡಗಿರಿ, ರಾಯಚೂರು, ಕವನದ ಶೀರ್ಷಿಕೆ: ಹಡೆದವ್ವ

ಹಡೆದವ್ವ

ಆಗಿನ್ನೂ ಎಳೆಯ ಪ್ರಾಯ ಇಳೆಯ ಗರ್ಭದಲಿ ಲೀನವಾದಳು ಅವಳು
ಕರುಳ ಬಳ್ಳಿಯ ಕಳಚಿ..

ಅವಳಿಲ್ಲದ ಕೊರಗು
ಕತ್ತು ಹಿಚುಕಿದಂತಾ ನೋವು
ಕಾವು ಕೊಟ್ಟು ಮರಿಗಳ ಎಬ್ಬಿಸಿ ಕಾಳು ಕೊಡದೇ ಹೋದಂತಹ ಬಾಸವು
ಉಸಿರು ಕಟ್ಟಿದಂತಾ ಭಾವುಕವು…

ನೀ ಇಲ್ಲದ ಪಟ್ಟ ಕಟ್ಟಿಕೊಂಡೇ
ಪರದಾಡಿದ ಪಡಬಾರದ ಕಷ್ಟ ಅಷ್ಟಿಷ್ಟಲ್ಲ
ಬಾಂಧವ್ಯ ಇಲ್ಲದ ಬಂಧುಗಳ ನಡುವೆ ಬಿಕ್ಕಿಬಿಕ್ಕಿ ಅತ್ತಿರುವೆ ಎಷ್ಟೋ ಸಲ….

ಏಳುಲೋಕ ಸುತ್ತಿದರೂ ಸಿಗಲಾರದ ಸ್ವಪ್ನ ಸುಂದರಿ ಅವಳು
ಸೋತಾಗ ಸಂತೈಸಲು ಸನಿಹ ಇಲ್ಲದವಳು….

ಹೆಜ್ಜೆಯ ಮೇಲೆ ಹೆಜ್ಜೆಯನಿಡುವ ಗೆಜ್ಜೆಯ ಸದ್ದುಗಳ ಕೇಳಲು ಇಲ್ಲವಳು
ಕೊಳಲಿನ ದನಿಯ ಮಾತಿನ ಸವಿಯ ಸಂಭ್ರಮಿಸುವ ಮಾತೃ ಇನ್ನಿಲ್ಲದವಳು….

ಮನಕೆ ಸಿಕ್ಕರೂ ಕಣ್ಣಿಗೆ ಸಿಗಲಾಗುತ್ತಿಲ್ಲ ಅವಳ ಚಿತ್ರವು
ಕಲ್ಪನೆ ಊಹೆಗೂ ನಿಲುಕದಾಯಿತು ಅವಳ ಪ್ರತಿ
ರೂಪವು…

ಬೊಗಸೆಯಷ್ಟು ಪ್ರೀತಿಗೆ ಬಾಯಾರಿದವಳು ನಾನು
ವಾತ್ಸಲ್ಯದ ನೀರೆರೆದು ಪೋಷಿಸಲು ಇಲ್ಲ ಅವಳು ….

ಇರುಳ ಚಂದಿರ ತಾರೆ
ಹುಣ್ಣಿಮೆ ಬೆಳದಿಂಗಳ ನಡುವೆ ತುತ್ತ ನುಣಿಸು ಬಾ ಒಮ್ಮೆ
ನಿನ್ನ ಅಮೃತ ಹಸ್ತ ರುಚಿಯ ಸವಿದು ನಾನಾಗುವೆ ಧನ್ಯೆ….

ಇಳೆಯ ಗರ್ಭದಲಿ ಲೀನವಾದವಳು, ನೆತ್ತರು ಹರಿಸಿ ಹುಡುಕಿದರೂ ಸಿಗಲ್ಲೊಲ್ಲಳು
ಕೈ ಬೆರಳ ಹಿಡಿದು ನಡೆಸಿದವಳು….

ನೊಂದು ಬೆಂದು ಬಳಿಲಿದೆ ಒಡಲು
ತುಸು ಹೊತ್ತು ತಲೆ ಇಟ್ಟು ದಣಿವಾರಿಸಲು ಇಲ್ಲ ನಿನ್ನ ಮಡಿಲು….

ಹಡೆದವ್ವಾ… ನಿನಗಾಗಿ ಹಂಬಲಿಸುವ ಹಸುಗೂಸಿನಂತೆ ನಾನು
ಅಸುನೀಗಿ ಹೋದೆ ಹುಡುಕಲೆಂತು ನಾನು
ಎನ್ನ ಮಗಳಾಗಿ ಹುಟ್ಟಿ ಬಂದೆ ನೀನು
ಅವಳಲ್ಲಿ ನಿನ್ನನ್ನೇ ಕಂಡೆ ನಾನು…

-ರೇಣುಕಾ ಎಸ್ ಮಾಡಗಿರಿ.
ಸಾ.ರಾಯಚೂರು