ಸಂಭ್ರಮದ ಹುಣ್ಣಿಮೆಗೆ….
ಇಲ್ಲಿ
ಈ ನೆಲದಲ್ಲಿ
ಬಿತ್ತಿದ್ದನ್ನೇ ಉಣ್ಣಬೇಕು
ಆಡಿದ್ದನ್ನೇ ಮರಳಿ
ಪಡೆಯಬೇಕು
ಎಲ್ಲರೆದೆಗಾಯಕ್ಕೆ
ಮುಲಾಮು ಸವರಿದವರೇ
ವಿನೀತರಾಗಿ ತೆರೆಮರೆಗೆ
ಸರಿದು ಹೋದರು
ಇನ್ನು….
ಹಸಿಹಸಿ ಗಾಯಗಳ
ಕರುಣೆಯಿಲ್ಲದೆ ಕರುಣಿಸುವ
ನಿನ್ನ ಪಾಡನ್ನು ಹೇಗೆ
ಊಹಿಸಿಕೊಳ್ಳುವುದು?
ಮಕಾಡೆ ಮಲಗಿದಾಗ
ಕೂಡಿಟ್ಟ ದುಡ್ಡು ಜೀವ ತುಂಬುವುದೆ?
ಉಗುಳುವ ನಾಲಿಗೆ ನಂಜಿಗೆ
ಯಾವ ಕಾಲಕ್ಕೂ ಮದ್ದಿಲ್ಲ
ಅಮೃತವನಿಕ್ಕುವ ಕೈಗೂ
ವಿಷ ಮೆತ್ತಿ ಮೆರೆವೆಯಲ್ಲ
ಚಿರಂಜೀವಿ ಎಂದುಕೊಂಡೆಯಾ ನಿನ್ನ?
ಕಾಲನ ತುಳಿತಕ್ಕೆ ಸಿಕ್ಕು
ನಲುಗದವರೇ ಇಲ್ಲ
ತುಂಬಬೇಕಷ್ಟೇ ಪಾಪದ ಬಿಂದಿಗೆ….
ಕಾಯುತ್ತಿದ್ದೇವೆ ಕಣ್ಣಗಲಿಸಿ
ಆ ಸಂಭ್ರಮದ ಹುಣ್ಣಿಮೆಗೆ
ಕಣ್ಣ ತುಂಬ ಅರಳಿ ನಿಲ್ಲುವ
ತುಂಬು ಚಂದಿರನ ಆ ಬೆಳದಿಂಗಳಿಗೆ!
-ನಾಗೇಶ್ ಜೆ. ನಾಯಕ, ಸವದತ್ತಿ
—–