ನಿಜ ಗೆಳೆಯ
ಎಲ್ಲರೆದೆಯಲ್ಲೂ
ಯಾವುದೋ ದುಃಖವೊಂದು
ಮುರಿದ ಮುಳ್ಳಿನಂತೆ
ಉಳಿದು ಬಿಟ್ಟಿರುತ್ತದೆ
ಅದಕ್ಕೊಂದಿಷ್ಟು ಮುಲಾಮು ಹಚ್ಚಿ
ಸಂತೈಸುವ ಕಾರ್ಯದಲ್ಲಿ
ಗೆಳೆತನ ಸದಾ ಮುಂದಿರುತ್ತದೆ .
ಗೆಳೆಯನ ಕೈಯೊಂದು
ಹೆಗಲ ಮೇಲಿದ್ದರೆ ಸಾಕು
ಭರವಸೆಯೊಂದು ನಮ್ಮ ಬೆನ್ನಿಗಿದ್ದಂತೆಯೆ .
ಗೆಳೆಯನೊಬ್ಬ
ನಾನಿದ್ದೀನಿ ಕಣೊ
ಅಂತ ಜೊತೆ ನಿಲ್ಲುತ್ತಾನಲ್ಲ …?
ಅಲ್ಲಿಗೆ ಬದುಕನ್ನು ಅರ್ಧ ಗೆದ್ದಂತೆಯೆ .
ಗೆಳೆಯ ಸುಮ್ಮನೆ
ಒಮ್ಮೆ ಅಪ್ಪಿಕೊಂಡರೆ ಸಾಕು …
ಎದೆಯ ದುಃಖವೆಲ್ಲಾ
ಅಮ್ಮನ ಮಡಿಲೊಂದು ಸಿಕ್ಕಂತೆ
ಪ್ರಶಾಂತವಾಗಿ ಮಲಗಿಬಿಡುತ್ತದೆ .
ಒಬ್ಬ ನಿಜವಾದ ಗೆಳೆಯ
ಸಮಯ ಬಂದಾಗ
ಸಂತೈಸುವ ಅಮ್ಮನೂ ಆಗುತ್ತಾನೆ
ಗದರಿಸುವ ಅಪ್ಪನೂ ಆಗುತ್ತಾನೆ .
ಹಾಗಾಗದಿದ್ದವನು
ಒಬ್ಬ ಒಳ್ಳೆಯ ಗೆಳೆಯನಾಗಿರುವುದರಲ್ಲಿ
ಸೋತಿದ್ದಾನೆ ಎಂದೇ ಅರ್ಥ .
ಕಷ್ಟ ಕಾಲದಲ್ಲಿ
ಗೆಳೆಯನೊಬ್ಬ
ನಮ್ಮ ಪಕ್ಕದಲ್ಲಿದ್ದರೆ
ಸಾಕ್ಷಾತ್ ಆ ಭಗವಂತನೆ
ನಮ್ಮ ಜೊತೆಗಿದ್ದಂತೆ ಲೆಕ್ಕ .
ಜೊತೆಗೇ ಇದ್ದು
ದಾರಿ ತಪ್ಪಿಸುವವನು
ಗೆಳೆತನದ ಹೆಸರಲ್ಲಿ
ಗೆಳೆಯನ ಮುಖವಾಡ ತೊಟ್ಟ
ನಮ್ಮ ಮೊದಲ ಶತ್ರುವಾಗಿರುತ್ತಾನೆ .
ನಿಜವಾದ ಗೆಳೆಯನಾದವನು
ಸರಿಯಾದ ದಾರಿ ತೋರಿ
ತಲುಪಬೇಕಾದ ಗುರಿ ಮುಟ್ಟಿಸುವ
ನಕ್ಷೆಯಂತೆ ಕಾರ್ಯ ನಿರ್ವಹಿಸುವವನಾಗಿರುತ್ತಾನೆ
-ಶ್ರೀ …….., ಬೆಂಗಳೂರು
—–