ಈ ಸಲವಾದರೂ ಎಲ್ಲಾದರೂ ಹೋಗಲೇಬೇಕು..
ಇಲ್ಲವಾದರೆ ಬೇರುಗಳು ಬೆಳೆಯಬಹುದು..
ಆಕೆಗೊಂದು ಆಸೆ..
ಹತ್ತು ವರ್ಷಗಳಿಂದ ಇದೊಂದೇ ಸಾಲು
ಜೊತೆಯಾಗಿದೆ ಆಕೆಗೆ.
ಮೊದಲ ಸಲ ಅಂದುಕೊಂಡಿದ್ದಳು..
ಅಯ್ಯೋ ಬಸುರಿ ಹಾಗೆಲ್ಲ ಓಡಾಡಬಾರದು.
ಮನೆಯಲ್ಲಿ ಇರೋಕೇನು ಸಮಸ್ಯೆ.?
ಎರಡನೆಯ ಸಲಕ್ಕೆ ಮಳೆಗಾಲ
ಎಳೆಕೂಸಿನ ಜೊತೆ ಹೋಗ್ತಾರಾ..
ಮಗುಗೆ ಶೀತವಾದರೆ..?
ಮೂರನೆಯ ಸಲಕ್ಕೆ ಅಮ್ಮನಿಗೆ ಹುಷಾರು ತಪ್ಪಿದೆ
ಮನೆ ಸೊಸೆಯೇ ಹೊರಗೆ ಸುತ್ತಾಡಿದರೆ ಹೇಗೆ..
ಕಾರಣಗಳು ಬೇಕಾದಷ್ಟಿವೆ..
ಮಕ್ಕಳ ಪರೀಕ್ಷೆಯಿದೆ, ಸಾಕಿದ ನಾಯಿಯಿದೆ..
ವೀಕೆಂಡಲ್ಲೇ ಮುಟ್ಟಿನ ದಿನ ಕಾದಿದೆ..
ಅವರು ಯಾರೋ ನಾಮಕರಣಕ್ಕೆ
ಕರೆಯಲು ಬಂದಿದ್ದಾರೆ..
ಒಗೆಯಲೊಂದಿಷ್ಟು ಬಟ್ಟೆಗಳಿವೆ
ಗಾರ್ಡನಿಂಗ್ ಮಾಡುವ ಮಾಲಿ
ಅಂದೇ ಬರುವೆನೆಂದಿದ್ದಾನೆ..
ಗಂಡನಿಗೆ ಎಲ್ಲೋ ಪಾರ್ಟಿ ಇದೆ..
ಮುಗಿಸಿ ಬರೋದು ಲೇಟಾಗತ್ತೆ..
ಅತ್ತೆ ಮಾವನ ಟೆಂಪಲ್ ರನ್ ಬಾಕಿಯಿದೆ..
ಕಾರು ಸರ್ವಿಸಿಗೆ ಕೊಟ್ಟಿದೆ..
ಅಲ್ಲೆಲ್ಲೋ ಭೂಕುಸಿತ, ದಾರಿಯೇ ಇಲ್ಲವಂತೆ..
ಮುಂದಿನ ವಾರದ ಹಬ್ಬಕ್ಕೆ ಇಂದೇ
ಸ್ವಚ್ಛ ಮಾಡೋದಿದೆ..
ಮೊನ್ನೆಯಿನ್ನೂ ಹುಷಾರು ತಪ್ಪಿ ಖರ್ಚಾಗಿದೆ..
ಸಂಬಳ ಬರೋಕೆ ತಡವಾಗಿದೆ..
ಬೇರುಗಳು ಆಕೆಯನ್ನು ಸುತ್ತಿ
ನೆಲಕ್ಕೊತ್ತಿ ಹಿಡಿದಿವೆ..
ಯಾರೋ ಮಾತನಾಡುತ್ತಿದ್ದಾರೆ..
ನಾನು ಟ್ರಾವೆಲ್ ಫ್ರೀಕ್..
ಮನೆಲಿ ಇರೋದೇ ಇಲ್ಲ,
ನೋಡದ ಜಾಗವೇ ಇಲ್ಲ…
ಕಿತ್ತೆಸೆಯುತ್ತಿದ್ದಾಳೆ ಅವಳು
ಎಲ್ಲ ಬೇರು ಬಿಳಲುಗಳ..
ಕಿವಿಗೆ ಮುಚ್ಚಿದ್ದು, ಕಣ್ಣು ಕಟ್ಟಿದ್ದು..
ಮಾತು ಮರೆಸಿ, ಕಾಲು ಕೈ ಕಟ್ಟಿ ಹಾಕಿದ
ಒಂದೊಂದು ಬೇರನ್ನೂ
ಬಿಡಿಸಿ ಹೊರಬರುತ್ತಾಳೆ..
ಹಾಗೂ ಎಳೆತ..
ಹೆಜ್ಜೆಯಿಡಲಾರದಂತೆ..
ಎಳೆದಷ್ಟೂ ಜೊತೆಗೆ ಬಂದಂತೆ..
ಕರುಳಿಂದ ಬಂದ ಬಳ್ಳಿ..
ಕತ್ತರಿಸುವಂತಿಲ್ಲ ಈಗ..
ಎಳೆಯುತ್ತಾಳೆ, ಜೊತೆಗೆ..
ನಡೆಯುತ್ತಾಳೆ....
ಈ ಸಲ..
ಎಲ್ಲೋ ಹೋಗುತ್ತಿದ್ದಾಳೆ.
-ಸಮುದ್ಯತಾ ಕಂಜರ್ಪಣೆ, ಬೆಂಗಳೂರು
—–
ಅರ್ಥವತ್ತಾದ ಸರಳ ರಚನೆ. ಗಂಭೀರ ಚಿಂತನೆ. ಮತ್ತೂ ಮತ್ತೂ ಓದಿಸಿತು. ಅಭಿನಂದನೆಗಳು. (ರಾಧಾಕೃಷ್ಣ ಉಳಿಯತ್ತಡ್ಕ )