ಶಿಕ್ಷಕರು ಶಾಲೆಗೆ‌ ಮಾತ್ರವಲ್ಲ ಸಮಾಜಕ್ಕೂ ಮಾಸ್ತರ ಆಗಬೇಕು -ಹಿರಿಯ ಸಾಹಿತಿ ನಿಂಗಣ್ಣ ಕುಂಟಿ

ಬಳ್ಳಾರಿ, ಸೆ.22: ಶಿಕ್ಷಕರು ಶಾಲೆಗೆ‌ ಮಾತ್ರವಲ್ಲ ಸಮಾಜಕ್ಕೂ ಮಾಸ್ತರ ಆಗಬೇಕು ಎಂದು ಹಿರಿಯ ಮಕ್ಕಳ ಸಾಹಿತಿ, ನಿವೃತ್ತ ಅಧ್ಯಾಪಕ ಧಾರವಾಡದ ನಿಂಗಣ್ಣ ಕುಂಟಿ ಅವರು ಹೇಳಿದರು.
ಬಳ್ಳಾರಿ ಪೂರ್ವ ವಲಯದ ಸರ್ಕಾರಿ  ಪ್ರಾಥಮಿಕ, ಪದವೀಧರ ಹಾಗೂ ಪ್ರೌಢ ಶಾಲಾ ಶಿಕ್ಷಕರ ಎಲ್ಲಾ ವೃಂದ ಸಂಘಟನೆಗಳ  ಸಂಯುಕ್ತಾಶ್ರಯದಲ್ಲಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗ ಮಂದಿರದಲ್ಲಿ ಶನಿವಾರ ಜರುಗಿದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ, ಸಾವಿತ್ರಿ ಬಾಯಿ ಫುಲೆ ಅವರ ಸಂಸ್ಮರಣೋತ್ಸವ ಹಾಗೂ ಉತ್ತಮ‌ ಶಿಕ್ಷಕ ಮತ್ತು ನಿವೃತ್ತ ಶಿಕ್ಷಕರಿಗೆ ಗೌರವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಸಮಾಜ‌ಮುಖಿ ಕಾರ್ಯಗಳ‌ ಮೂಲಕ ಶಿಕ್ಷಕರು ಜನ‌ಮನ ಗೆಲ್ಲಲು ಸಾಧ್ಯ ಎಂದು ತಿಳಿಸಿದರು.
ಶಿಕ್ಷಕರು ಮನಸು‌ ಮಾಡಿದರೆ ಸಮಯಪ್ರಜ್ಞೆ ಇದ್ದರೆ
ಏನನ್ನಾದರೂ ಸಾಧಿಸ‌ಬಲ್ಲರು, ಎಂತಹ ಸಮಸ್ಯೆಗಳನ್ನು ಪರಿಹರಿಸ ಬಲ್ಲರು ಎಂದು ಉದಾಹರಣೆ ಸಹಿತ ವಿವರಿಸಿದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಪ್ರಸಿದ್ಧ ಕವಿ
ದ.ರಾ. ಬೇಂದ್ರೆ ಅವರೊಂದಿಗಿನ‌ ತಮ್ಮ ಒಡನಾಟವನ್ನು ಸ್ಮರಿಸಿದ ನಿಂಗಣ್ಣ ಅವರು ಅಧ್ಯಾಪಕರು ಮಕ್ಕಳ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸ ಬೇಕು. ಕಾಯಕ ಜೀವನದಲ್ಲಿ ವ್ರತಾ, ಶ್ರದ್ಧೆ ಇರಬೇಕು ಎಂದು‌ ಸಲಹೆ‌ ನೀಡಿದರು.
ಮುಂದಿನ ವರ್ಷದ ಶಿಕ್ಷಕರ ದಿನಾಚರಣೆಗೆ ಹತ್ತು ಸಾವಿರ ರೂ. ದೇಣಿಗೆ ನೀಡಲಾಗುವುದು ಎಂದು ಘೋಷಿಸಿದರು.


ಸಮಾರಂಭ ಉದ್ಘಾಟಿಸಿದ ಬಿಇಓ  ನಯೀಮುರ್ ರಹಮಾನ್ ಮಾತನಾಡಿ, ದೇಶದ ಕಟ್ಟುವಲ್ಲಿ ಶಿಕ್ಷಕರು,  ಸೈನಿಕ, ರೈತ  ಪಾತ್ರ ಮುಖ್ಯವಾದುದು ಎಂದು ತಿಳಿಸಿದರು.
ಬಾಂಬ್‌ದಾಳಿಯಿಂದ ನಲುಗಿದ್ದ ಜಪಾನಿನ ಚಿತ್ರಣವನ್ನು ಆ ದೇಶದ ಶಿಕ್ಷಕರು ಬದಲಾಯಿಸಿದರು ಎಂದರು.
ಮಕ್ಕಳಲ್ಲಿ ಕನಸು ಬಿತ್ತುವ ಶಿಕ್ಷಕರು ಅವರ ವ್ಯಕ್ಯಿತ್ವ ರೂಪಿಸುತ್ತಾರೆ. ದೇಶದ ಪ್ರಧಾನಿ, ರಾಷ್ಟ್ರಪತಿಯಂತಹ ಉನ್ನತ ಸ್ಥಾನಕ್ಕೆ ಏರುವಲ್ಲಿಯೂ ಶಿಕ್ಷಕರ ಪಾತ್ರ ಅನನ್ಯ ಎಂದು ಹೇಳಿದರು.
ಅಧಿಕಾರಿಗಳಿಗೆ ಶಿಸ್ತು, ಸಮರ್ಪಣಾ ಮನೋಭಾವ ಅತ್ಯಗತ್ಯ. ಶಿಕ್ಷಕರಿಗಾಗಿ ತಮ್ಮ ಸೇವೆಯನ್ನು ಸಮರ್ಪಿಸುತ್ತಿರುವೆ. ತಮ್ಮ ಟೇಬಲ್ ಮೇಲೆ ಒಂದು ಫೈಲ್ ಬಾಕಿ ಇರುವುದಿಲ್ಲ ಎಂದು ಹರ್ಷಿಸಿದರು.
ಕರ್ನಾಟಕ‌ ರಾಜ್ಯ ಸರ್ಕಾರಿ ನೌಕರರ ಗೃಹ ನಿರ್ಮಾಣ ನಿಗಮದ ಅಧ್ಯಕ್ಷ ಎಂ.ಟಿ.  ಮಲ್ಲೇಶಪ್ಪ ಮಾತನಾಡಿ ಮನಸ್ಸಿದ್ದರೆ ಸಾಲ‌ಮಾಡಿಯಾದರೂ ದಾನ‌ ನೀಡುತ್ತಾರೆ ಎಂದರು.


ಎನ್.ಜಿ ಓ ಅಧ್ಯಕ್ಷ ಶಿವಾಜಿ ರಾವ್, ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ‌ ಸಹಕಾರ ಸಂಘದ ಅಧ್ಯಕ್ಷ ಪಂಪನಗೌಡ , ತಿಪ್ಪಾರೆಡ್ಡಿ , ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲಾ ಸಂಘದ ತಾಲೂಕು ಘಟಕದ ಅಧ್ಯಕ್ಷ ಗಿರಿಮಲ್ಲಪ್ಪ ಮಾತನಾಡಿದರು.
ಬಿ ಆರ್ ಸಿ. ಅಡ್ಡೇರ ಮಲ್ಲಪ್ಪ, ಶಿಕ್ಷಣ ಇಲಾಖೆಯ ಅಧಿಕಾರಿಗಳಾದ ರಾಠೋಡ್, ಶಿವ ನಾಯ್ಕ, ವಿವಿಧ ಶಿಕ್ಷಕರ ಸಂಘಟನೆಗಳ ಮುಖಂಡರಾದ ಮೆಹತಾಬ್, ಎನ್. ರಮೇಶ್, ಅಸಂಗಿ ನಾಗರಾಜ್, ಎ ಕೆ ಚನ್ನಬಸಪ್ಪ, ವೀರೇಶ್, ಎ. ಬಸವರಾಜ್, ಕೆ ಮಲ್ಲಿ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನಲವತ್ತು ಜನ ಪ್ರಾಥಮಿಕ, ಪ್ರೌಢಶಾಲಾ ಅಧ್ಯಾಪಕರಿಗೆ ಉತ್ತಮ‌ ಶಿಕ್ಷಕ ಪ್ರಶಸ್ತಿ ನೀಡಿ ಗಣ್ಯರು ಗೌರವಿಸಿದರು. ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಸನ್ಮಾನ: ಶೈಕ್ಷಣಿಕ ದಾನಿ ಝಾನ್ಸಿ ಲಕ್ಷ್ಮೀ ಅವರನ್ನು ಸತ್ಕರಿಸಲಾಯಿತು.
ಅಧ್ಯಾಪಕರ ಸಂಘದ ಹರಿಪ್ರಸಾದ್ ಸ್ವಾಗತಿಸಿದರು. ಎನ್. ರಮೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಾಪಕ ಮೃತ್ಯುಂಜಯ ಅತಿಥಿಗಳನ್ನು ಪರಿಚಯಿಸಿದರು.
—–