ಬುದ್ಧನಿಗೆ ನಮನ
ನೀನು ಕರುಣಿಸಿದೆ ಕಾರುಣ್ಯದಿಂದ ಲೋಕ ಬೆಳಗಿಸುವ ಪಾಠವನ್ನು ಬೋಧಿಸಿದೆ ಬೋಧಿವೃಕ್ಷದ ಕೆಳಗೆ ಮಹಾಮೌನದ ಬಳ್ಳಿ ಹಬ್ಬಿಸಿ ಹೂವು ಹೀಚು ತುಂಬಿ ಮಾಗಿ ಫಲವಾಗಿ ಸಕಲ ಜೀವಜಾಲಕ್ಕೆ ಒಡಲ ಬೀಜವಾದೆ ಕರುಳ ಹಾಡಾದೆ
ನೀನು ಕರುಣಿಸಿದ ದಿನವೇ ಬೆಳಕಾಯಿತು
ಮನದ ಕತ್ತಲೆಯ ದೂಡಿ ಅಲ್ಲಿ ಸಮತೆಯ ದೀಪ ಮುಡಿಸಿದೆ
ನೀನೂ ಮುಡಿದೆ,ಮುಂಗುರುಳ ತೀಡಿ
ಗುಂಗುರುಗೂದಲ ಕಟ್ಟಿ ಮಂದಸ್ಮಿತವ ಬೀರಿ
ಮೌನದ ಮಹಾಸಾಗರವಾದೆ
ನೀನು ಬಿತ್ತಿದ ಮೂರೇ ಮೂರು ಬೀಜಗಳು
ಜಗದ ಮಹಾವೃಕ್ಷಗಳಾಗಿವೆ
ಅದರ ಅವಯವಗಳ ಯಾರೇ ಕಡಿದರೂ
ಇನ್ನಷ್ಟು ಮತ್ತಷ್ಟು ಮೊಗದಷ್ಟು ಚಿಗುರುಣಿಸಿ
ಬೆಳೆಯುವ ಬೋಧಿಮನವೇ
ಬಾ ಗಂಧವ್ರತದ ಬಾಳೇ
ನೆಲಬಾನಿಗೆ ಹಬ್ಬಿನಿಂತ ಮಹಾಯೋಗಿಯ
ಬೇರೇ.
– ಡಾ.ನಿಂಗಪ್ಪ ಮುದೇನೂರು, ಧಾರವಾಡ