ಅನುದಿನ ಕವನ-೧೩೬೪, ಕವಿ: ಎಲ್ವಿ, ಬೆಂಗಳೂರು, ಕವನದ ಶೀರ್ಷಿಕೆ:ಇರದ ಇರುವಿನ ತಾವು

ಇರದ ಇರುವಿನ ತಾವು

ಇದ್ದೇನೆ
ಇದ್ದೂ ಇರದಂತೆ ಈ ಜಗದ
ಸಂತೆಯೊಳಗೆ;
ಮಾಗಿಯೂ ಹಣ್ಣಾಗದ ಮಾವಿನ
ಹಾಗೆ.
ಮುಟ್ಟಿ ನೋಡುತ್ತಾರೆ ಮೂಸಿ
ಹಿಚುಕಿ ಮತ್ತೆ ಇರುವಲ್ಲೇ ಇಟ್ಟಿದ್ದಾರೆ
ತೂಕಕೂ ಹಾಕದೆ.

ಇಲ್ಲೂ ಇದ್ದೇನೆ
ನೀರಿರದ ಬಾವಿಯೊಳಗಿಳಿಬಿಟ್ಟ
ಕೊಡದ ಹಾಗೆ;
ಮೇಲೆ   ಯಾರೋ  ಎಳೆದೆಳೆದು ಮತ್ತೆ ಮತ್ತೆ ಕುಕ್ಕರಿಸುತ್ತಾರೆ;
ಕತ್ತಿಗೆ ಸುತ್ತಿದ  ಹಗ್ಗ ಮತ್ತಷ್ಟು
ಬಿಗಿಯಾಗಿ ಉಸಿರು ಕಟ್ಟುತಿದೆ.

ಸ್ವಂತದ ಹೊಟ್ಟೆಯಲಿ
ಬಾಡಿಗೆ ಗರ್ಭ;

ಬೆಳೆಯುತಿದೆ
ಅನು ದಿನವೂ ಚೂರೇ ಚೂರು.

ಆಗಾಗ ಬಂದವಳು ಹೊಟ್ಟೆ ಮುಟ್ಟಿ
ಮೈದಡವಿ ಚಿಲ್ಲರೆ ಕಾಸು  ಕೈಗಿಟ್ಟು
ಇಷ್ಟಗಲ ನಕ್ಕು ನೋವ ನೇವರಿಸಿ
ಹೊರಡುತ್ತಾಳೆ ಅಸಲೀ ತಾಯಿ.

ಅಳುವ ಮಗುವ
ಮೈ ಮರೆಸಿ ಮಲಗಿಸಿ ಸಂತೆಗೆ
ಹೋದ  ಓ ತಾಯಿಯೇ !  ಬೇಗ ಮರಳು.
ಹಸಿದ ಮಗುವಿನ ಅತ್ತು ದಣಿದ  ಕಣ್ಣು
ಹೊಸಿಲ ಒಳ ಹೊರಗೇ ಆಡುತಿವೆ.

ಹೇಗಿದ್ದೀ ..!?
ಎಂದು ಇನ್ನೊಮ್ಮೆ ಕೇಳದಿರು ಓ ಇವಳೆ!
ನನಗೂ ಅನುಮಾನವಿದೆ ನಾನು
ಹೇಗಿರುವಿನೆಂದು
ಅರ್ಧರ್ಧ ಬದುಕುತ್ತ ; ಇನ್ನರ್ಧ ಸಾಯುತ್ತ !


-ಎಲ್ವಿ, ಬೆಂಗಳೂರು
—–