ಹೊಸಪೇಟೆಯ ಖ್ಯಾತ ವಾಯ್ಲಿನ್ ವಾದಕ ಚಾರುಚಂದ್ರ ( ವಿಜಯ ಚಂದ್ರ) ಮಂಗಳವಾರ ಇಹಲೋಕ ತ್ಯಜಿಸಿದ್ದಾರೆ.
ಮರಿಯಮ್ಮನಹಳ್ಳಿಯಲ್ಲಿ ನಾನು ಪಿಯುಸಿ ಓದುವಾಗ (೧೯೮೮-೮೯) ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಯಾರನ್ನಾದರೂ ವಿಶೇಷ ವ್ಯಕ್ತಿಗಳನ್ನು ಕರೆಯಿಸಬೇಕೆಂದುಕೊಂಡಾಗ ಆಂಗ್ಲ ಉಪನ್ಯಾಸಕರಾಗಿದ್ದ ಕಾಕಂಡ್ಕಿ ಗೋಪಾಲ್ ರಾವ್ ಅವರು ಆಗ ಅವರೇ ಪ್ರಾಚಾರ್ಯಾರು ಕೂಡಾ ಆಗಿದ್ದರು. ಹೊಸಪೇಟೆಯಲ್ಲಿ ಚಾರುಚಂದ್ರ ಎಂಬ ವಿಶೇಷ ವ್ಯಕ್ತಿ ಇದ್ದಾರೆ ಅವರನ್ನು ನೀನು ಹೋಗಿ ವಿನಂತಿಸಿಕೊಂಡು ಬಾ ಖಂಡಿತಾ ಬರ್ತಾರೆ ಎಂದು ಸೂಚಿಸಿದರು, ಆಗ ಗೆಳೆಯ ಸಹಪಾಠಿ ಅಶೋಕ್ ಕೂಡಿ ರೈಲ್ವೇ ನಿಲ್ದಾಣದ ಬಳಿ ಇದ್ದ ಅವರ ತೋಟದ ಮನೆಗೆ ಹೋದ್ವಿ. ವಿನಂತಿಸಿಕೊಂಡ್ವಿ ಕಾರ್ಯಕ್ರಮಕ್ಕೆ ಬಂದು ಅವರು ವಾಯ್ಲಿನ್ ನುಡಿಸಿದರೆ ಅವರ ಶ್ರೀಮತಿ ಬಾನುಮತಿ ಗಿಟಾರ್ ನುಡಿಸಿ ಕಾರ್ಯಕ್ರಮ ಯಶಗೊಳಿಸಿದರು. ಹೀಗೆ ಪರಿಚಯವಾಗಿದ್ದ ಅವರು ನಂತರ ಅವರ ಒಡನಾಟ ಹೆಚ್ಚಾಗುತ್ತಾ ಹೋಯಿತು. ನಾನು ಓದುವಾಗ ಪಾರ್ಟ್ ಟೈಂ ಜಾಬ್ ಮಾಡುತ್ತಿದ್ದೆ. ರಾಮಕೃಷ್ಣ , ಪಂಪಾಸ್ ಬಾಂಬೇ ಡೈಯಿಂಗ್ ಷೋರೂಂನಲ್ಲಿ ಕೆಲಸ ಮಾಡುವಾಗ ಬಟ್ಟೆ ಕೊಳ್ಳಲು ಬರುತ್ತಿದ್ದರು. ಬಟ್ಟೆ ಬಣ್ಣ, ವಿನ್ಯಾಸದ ಕುರಿತು ವಿಶಿಷ್ಟ ಅಭಿರುಚಿಯನ್ನು ಹೊಂದಿದ್ದ ಅವರು. ಎಂತಹ ಬಣ್ಣ ಎಂತಹ ಮನಸ್ಥಿತಿಯವರು ತೊಡುತ್ತಾರೆ, ವಿನ್ಯಾಸದ ಆಯ್ಕೆಯ ವಿವಿಧ ಬಗೆ ಹೀಗೆ ನನಗೆ ಬಟ್ಟೆ ಸೈಕಾಲಜಿಯ ಪಾಠ ಹೇಳಿಕೊಟ್ಟರು. ನಂತರ ನಾನು ಹೊಸಪೇಟೆ ಟೈಮ್ಸ್ ನಲ್ಲಿ ವರದಿಗಾರನಾಗಿದ್ದಾಗ ಹೊಸಪೇಟೆಯ ಕುರಿತು, ವ್ಯಕ್ತಿಗಳ ಕುರಿತು, ಸಂಗೀತ, ಸಾಹಿತ್ಯದವರ ಸಾಂಗಾತ್ಯದ ಅವರ ನೆನಪಿನ ಬುತ್ತಿಯನ್ನು ಬಿಚ್ಚುತ್ತಿದ್ದರು.
ಅವಿಭಿಜಿತ ಬಳ್ಳಾರಿ ಜಿಲ್ಲೆಯ ಮೊದಲ ಸಂಗೀತ ನಿರ್ದೇಶಕರು ಎಂಬ ಹೆಗ್ಗಳಿಕೆಯನ್ನು ಹೊಂದಿದ್ದ ಅವರು ಹೊಸಪೇಟೆಯವರೇ ನಿರ್ಮಿಸಿದ ಮಮತೆಯ ಗುಡಿ ಎಂಬ ಸಿನಿಮಾಕ್ಕೆ ಸಂಗೀತ ನೀಡಿದ್ದರು. ಮತ್ತು ಇತ್ತೀಚೆಗೆ ಅವರೇ ನಿರ್ದೆಶಿಸಿ , ನಿರ್ಮಿಸಿದ ಗುಪ್ತಗಾಮಿನಿ ಸಿನಿಮಾ ತೆರೆಕಂಡಿದೆ.
ಇದಕ್ಕೂ ಮೊದಲು ಅವರು ಲಂಡನ್ ನಲ್ಲಿ ಬಿಬಿಸಿಯಲ್ಲಿ ಆಂಗ್ಲ ಉದ್ಘೋಷಕರಾಗಿ ಸೇವೆ ಸಲ್ಲಿಸಿ ಭಾರತಕ್ಕೆ ವಾಪಾಸ್ಸು ಬಂದ ನಂತರ ಚಾರು ಮೆಲೋಡಿಸ್ ಎಂಬ ಸಂಗೀತ ಸಂಘವನ್ನು ಕಟ್ಟಿ ಅನೇಕ ಕಾರ್ಯಕ್ರಮಗಳನ್ನು ನೀಡಿ ಜನಪ್ರಿಯರಾಗಿದ್ದರು.ನಂತರ ಹೊಸಪೇಟೆಯಲ್ಲಿ ಇಂಗ್ಲೀಷ್ ಸ್ಪೋಕನ್ ಇಂಗ್ಲೀಷ್ ಶಾಲೆಯನ್ನು ತೆರೆಯುತ್ತಾರೆ. ಹೊಸಪೇಟೆಯ ಸಿಟಿ ಚಾನಲ್ ನಲ್ಲಿ ಆಂಗ್ಲ ಸುದ್ದಿಯ ಉದ್ಘೋಷಕರಾಗುತ್ತಾರೆ.
ಇವರ ತಂದೆ ಸ್ವಾತಂತ್ರ್ಯ ಹೋರಾಟಗಾರ ಹಾಗು ಮದ್ರಾಸ್ ಪ್ರಾವಿನ್ಸೆ ಸರಕಾರದಲ್ಲಿ ೭ ಖಾತೆಯನ್ನು ಹೊಂದಿದ್ದ ಸಚಿವ ಆರ್.ನಾಗನಗೌಡ ಹಾಗೂ ಹೊಸಪೇಟೆಯ ಮೊದಲ ಮಹಿಳಾ ವೈದ್ಯೆಯಾಗಿದ್ದ ಡಾ.ಸಾವಿತ್ರಮ್ಮ ಅವರ ಪುತ್ರ ಎಂಬುದು ವಿಶೇಷ.
ಹೊಸಪೇಟೆಯಲ್ಲಿ ಅವರೊಂದು ವಿನೂತನ ಮನೆಯನ್ನು ಕಟ್ಟಿ ವಾಸ್ತು ಶಿಲ್ಪಿ ಗೌರಿ ತಿರುಪತಿ ರೆಡ್ಡಿ ಅವರಿಂದ ಶಹಬ್ಬಾಸ್ ಎಂದೆನಿಸಿಕೊಂಡವರು. ತಾಯಿಯಿಂದ ಬಳುವಳಿಯಾಗಿ ಬಂದ ಗಣಿಯೊಂದರ ಮಾಲೀಕರಾಗಿದ್ದರು. ಇಂತಹ ಅಪರೂಪದ ವ್ಯಕ್ತಿ ನನಗೆ ಗೆಳೆಯರಾಗಿದ್ದರು ಎನ್ನುವುದು ನನ್ನ ಸೌಭಾಗ್ಯವಾಗಿತ್ತು. ಇಂದು ನಮ್ಮನ್ನಗಲಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಕೋರುವೆ.
-ಶಿವಶಂಕರ ಬಣಗಾರ, ಕವಿ- ಪತ್ರಕರ್ತ-ಹೆಸರಾಂತ ಛಾಯಾಗ್ರಾಹಕ, ಹೊಸಪೇಟೆ