ಕಲಬುರಗಿ: ಕಲ್ಯಾಣ ಕರ್ನಾಟಕ ಸರಕಾರಿ ಪ್ರಥಮ‌ದರ್ಜೆ‌‌ ಕಾಲೇಜು ಅತಿಥಿ ಉಪನ್ಯಾಸಕರ ಸಂಘ ಅಸ್ತಿತ್ವಕ್ಕೆ!

ಕಲಬುರಗಿ, ಸೆ.26:ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಕಲ್ಯಾಣ ಕರ್ನಾಟಕ ಸಂಘವನ್ನು ರಚಿಸಲು ಉದ್ದೇಶಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಡಾ. ಚಂದ್ರಕಾಂತ್ ಶಿರೋಳೆ ಅವರು ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸೇವಾ ಭದ್ರತೆ, ವೇತನ ಹೆಚ್ಚಳ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ರಾಜ್ಯಾದ್ಯಂತ ಸುಮಾರು 413 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಪ್ರಾರಂಭವಾಗಿ ಎರಡು ತಿಂಗಳು ಕಳೆದರೂ ಸರಕಾರ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳದೇ ಸರ್ಕಾರಿ ಅತಿಥಿ ಉಪನ್ಯಾಸಕರ ಮತ್ತು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚಲ್ಲಾಟವಾಡಲಾಗುತ್ತಿದೆ ಎಂದು ಟೀಕಿಸಿದರು., ಸರ್ಕಾರ 2024-2025ನೇ ಶೈಕ್ಷಣಿಕ ಸಾಲಿನಲ್ಲಿ ಅತಿಥಿ ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳಲು ಸೆ. 6ರಂದು ಹೊರಡಿಸಿದ ಅಧಿಸೂಚನೆಯಂತೆ ಸೆ. 23ರಿಂದ ಕೌನ್ಸಿಲಿಂಗ್ ಪ್ರಾರಂಭವಾಗಬೇಕಿತ್ತು. ಆದಾಗ್ಯೂ, ಇಲ್ಲಿಯವರೆಗೂ ಯಾವುದೇ ಪ್ರಕ್ರಿಯೆಗಳನ್ನು ಪ್ರಾರಂಭ ಮಾಡದೇ ಇರುವುದರಿಂದ ದಿನಾಲೂ ವಿದ್ಯಾರ್ಥಿಗಳು ಕಾಲೇಜಿಗೆ ಬಂದು ತರಗತಿಗಳಿಲ್ಲದೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ಸರ್ಕಾರ ಈ ಕುರಿತು ಚಿಂತಿಸದೇ ಇರುವದರಿಂದ ಉನ್ನತ ಶಿಕ್ಷಣದಿಂದ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ ಹಾಗೂ ಇವರ ಭವಿಷ್ಯ ಹಾಳಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸರ್ಕಾರ ಅತಿಥಿ ಉಪನ್ಯಾಸಕರನ್ನು ಕಳೆದ ಎರಡು ತಿಂಗಳಿಂದ ತೆಗೆದುಹಾಕಿ ಅವರ ಕುಟುಂಬಗಳನ್ನೂ ಸಹ ಬೀದಿ ಪಾಲು ಮಾಡಿದೆ. ಅಲ್ಲದೇ ಈಗ ತಾನೆ ಪಿಯುಸಿ ಮುಗಿಸಿ ಭವಿಷ್ಯದಲ್ಲಿ ಕನಸುಗಳನ್ನು ಕಟ್ಟಿಕೊಂಡು ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಎರಡು ತಿಂಗಳಿಂದ ತರಗತಿಗಳಿಲ್ಲದೇ ಕಾಲೇಜಿಗೆ ಬಂದು ಕಾಲಹರಣ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಕೆಲವು ಕಾಲೇಜುಗಳ ಪ್ರಿನ್ಸಿಪಾಲರು ಅತಿಥಿ ಉಪನ್ಯಾಸಕರಿಗೆ ದೂರವಾಣಿ ಕರೆ ಮಾಡಿ ತರಗತಿಗಳನ್ನು ಯಾವುದೇ ಸಂಭಾವನೆ ಇಲ್ಲದೇ ತೆಗೆದುಕೊಳ್ಳಲು ಒತ್ತಡ ಹೇರುತ್ತಿದ್ದಾರೆ ಎಂದು ಅವರು ತೀವ್ರ ಬೇಸರ ಹೊರಹಾಕಿದರು.
ತಮ್ಮ‌ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಕಲ್ಯಾಣ ಕರ್ನಾಟಕ ಸಂಘ ರಚಿಸಲಾಗುತ್ತಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರವಿ ಬಿಳವಾರ್, ಡಾ. ಮಮತಾ ಪಾಟೀಲ್, ಡಾ. ರಮೇಶ್ ಕವಡೆ, ಡಾ. ಗುರುರಾಜ್ ಆರ್. ಕುಲಕರ್ಣಿ ಮತ್ತಿತರರು ಇದ್ದರು.
——