ಅನುದಿನ ಕವನ-೧೩೬೬, ಕವಿ: ಡಾ.ಲಕ್ಷ್ಮಿಕಾಂತ ಮಿರಜಕರ, ಶಿಗ್ಗಾಂವ, ಕವನದ ಶೀರ್ಷಿಕೆ:ಮೂಕರಾಗ ಹೇಗೆ ಅರ್ಥವಾದೀತು?

ಮೂಕರಾಗ ಹೇಗೆ ಅರ್ಥವಾದೀತು?

ಇದ್ದದ್ದು ಒಂದೇ ಮರ
ನೆರಳಿಗೂ ತಂಪಿಗೂ
ಹಣ್ಣಿಗೂ ಹಕ್ಕಿವಾಸಕ್ಕೂ
ಮಕ್ಕಳ ತೂಗುಯ್ಯಾಲೆಗೂ
ನೂರಾರು ವರ್ಷಗಳ ಇತಿಹಾಸ ಆ ಮರದ್ದು
ಜಾತಿ ನೋಡಲಿಲ್ಲ ಬಣ್ಣ ಕೇಳಲಿಲ್ಲ
ಧರ್ಮ ಎನ್ನಲಿಲ್ಲ
ಎಲ್ಲರನ್ನೂ ಪೋಷಿಸುತ್ತಿತ್ತು
ಎಲ್ಲರಿಗೂ ತಂಪೆರೆಯುತ್ತಿತ್ತು
ಒಂದೇ ಗರ್ಭದ ಮಕ್ಕಳೆಂಬಂತೆ

ಕೊನೆಗೂ ಬಂತು ಕರಾಳ ದಿನ
ರಸ್ತೆಯ ಅಗಲೀಕರಣ ಎಂಬ ಮಾರಿನರ್ತನ
ರಸ್ತೆಯ ಮಗ್ಗುಲಲ್ಲೇ ಇದ್ದ ಮರಕ್ಕೆ
ಬಿತ್ತು ಬುಡ ಸಮೇತ ಕತ್ತರಿ
ಹಠಾತ್ ದಾಳಿಗೆ ಮೂಕ ಹಕ್ಕಿಗಳೆಲ್ಲ ದಿಕ್ಕಾಪಾಲು ಕೊಡಲಿಯ ಹೊಡೆತಕ್ಕೆ
ರೆಂಬೆ ಕೊಂಬೆಗಳೆಲ್ಲ ಚೆಲ್ಲಾಪಿಲ್ಲಿ
ಒಂಚೂರು ಸದ್ದು ಮಾಡದೆ
ಮೌನವಾಗಿ ಧರೆಗುರುಳಿತು
ನೂರಾರು ಹಕ್ಕಿಗಳ ಆಶ್ರಯ ತಾಣ

ರಸ್ತೆ ಮೇಲೆ ಬಿದ್ದ ಮರದ
ಟೊಂಗೆಗಳ ಮೇಲೆ ಹಾರಿ ಬಂದು ಕುಳಿತ
ಮೂಕ ಪಕ್ಷಿಗಳು
ಟೊಂಗೆಗಳ ಜೊತೆ ರಸ್ತೆಗೆ ಬಿದ್ದ
ತಮ್ಮ ಮರಿಗಳ ಹುಡುಕಾಟ
ಕಳೆದುಕೊಂಡ ಮೊಟ್ಟೆಗಳ ಅರಸುವಿಕೆ
ಇದ್ದ ಒಂದು ಆಶ್ರಯ ಮನೆಯನ್ನು
ಕಳೆದುಕೊಂಡ ವೇದನೆ
ಮಾನವನ ಸ್ವಾರ್ಥ ಕೆಲಸಕ್ಕೆ ಛೀಮಾರಿ
ಏನೆಂದು ಗೊತ್ತಾಗಲಿಲ್ಲ
ಮೂಕ ಹಕ್ಕಿಗಳು ಚಿಂವ್ ಚಿಂವ್
ಎಂದು ಅರಚುತ್ತಲೇ ಇದ್ದವು
ತನ್ನ ಸ್ವಾರ್ಥಕ್ಕಾಗಿ ಏನೆಲ್ಲ ಮಾಡಲು ಸಿದ್ಧವಿರುವ
ಅಮಾನವೀಯ ಮಾನವಜಂತುವಿನ
ಜಾಣಕಿವುಡಿಗೆ ಮೂಕರಾಗ
ಹೇಗೆ ತಾನೇ ಅರ್ಥವಾದೀತು?

ಹುಡುಕುತ್ತಾ ಹೊಸ ಗೂಡು
ಹೊಸ ವಿಳಾಸ ಹೊಸ ಬದುಕು
ಹಾರಿ ಹೋದ ಹಕ್ಕಿಗಳು
ಮರಳಿ ಬರಲೇ ಇಲ್ಲ

-ಡಾ.ಲಕ್ಷ್ಮಿಕಾಂತ ಮಿರಜಕರ, ಶಿಗ್ಗಾಂವ