ಅನುದಿನ ಕವನ-೧೩೬೮, ಕವಯಿತ್ರಿ: ಲಾವಣ್ಯ ಪ್ರಭ, ಮೈಸೂರು, ಕವನದ ಶೀರ್ಷಿಕೆ:ಬದುಕುವ ಕಲೆ

ಬದುಕುವ ಕಲೆ

“ಉಸಿರುಗಟ್ಟಿಸುತ್ತಿದ್ದ ಧ್ವೇಷವನ್ನು ಉಫ್ ಎಂದು ಮೇಲಕ್ಕೆಸೆದುಬಿಟ್ಟೆ/ ಮೋಡಗಟ್ಟಿದ ಬಾನು ಕಪ್ಪಾಗಿ ಮರುದಿನವೇ ಮಳೆ/ಬಿಸಿಲಿಗೊಣಗಿದ ಕೆರೆಕಟ್ಟೆಯನು ತುಂಬುತ್ತಿದೆ/ತಬ್ಬಿ ಪ್ರೀತಿಯ ಸೆಲೆ.

ಹತಾಷೆ ಒಂಟಿತನ ವಿಷಾದದ ಬೀಜಗಳನ್ನೆಲ್ಲಾ/ತೂರಿ ಬೀಸಿದೆ ಮನೆಯ ಹಿಂದಿನ ಹಿತ್ತಲಿನೊಳಗೆ/ ತಿಂಗಳೊಳಗೇ ಮಲ್ಲಿಗೆ ಗುಲಾಬಿ ಪಾರಿಜಾತಗಳು/ಘಮಘಮಿಸಿ ಅರಳಿ ಹೂ ಬಿಟ್ಟು ಸಂಭ್ರಮಿಸಿ/ ಮನೆಯೊಳಗೀಗ ಉತ್ಸವದ ತಯಾರಿ.

ಸ್ವಾರ್ಥ ಅವಮಾನ ಅನುಮಾನ ದುರಾಸೆ/ನಿರಾಸೆ ತಿರಸ್ಕಾರಗಳ ಪುರಳೆಗಳನ್ನೆಲ್ಲಾ/ ಬೀದಿಗೆ ಸುರಿದು ಸರಿ ರಾತ್ರಿ ಬೆಂಕಿ ಹಚ್ಚಿಟ್ಟೆ/ ಮಾಘಮಾಸದ ಚಳಿಗೆ ಮೈ ಕಾಯಿಸಿಕೊಂಡು/ಬೆಚ್ಚಗಾಗುತ್ತಿವೆ ಬೀದಿ ಮಕ್ಕಳ ಜೀವ.

ವೃಥಾ ಕಾಡುವ ಸಾವಿನ ಭಯಕ್ಕೊಮ್ಮೆ/ನೇರ ಮುಖಾಮುಖಿಯಾದೆ/ಕರುಣೆ ಕ್ಷಮೆ ತಾಳ್ಮೆ ಪ್ರೇಮದ ಬದುಕು/ಬೆಳೆದು ಆಲವಾಗಿ ಬಂದು ಹೋಗುವವರಿಗೆಲ್ಲಾ/ಷೇಕ್ ಹ್ಯಾಂಡ್ ನೀಡಿ ನಗುತ್ತಿದೆ.

ಒಂದು ಸಣ್ಣ …ತೀರಾ..ಸಣ್ಣ…ವಿರಹವೊಂದನ್ನು / ಎದೆಯಲ್ಲಿ ಹಾಗೇ ಇರಲು ಬಿಟ್ಟುಬಿಟ್ಟೆ/ ನೊಂದು ಬೆಂದು ಹದಗೊಂಡು ಬರೆಸಿಕೊಂಡ/ ಅದೆಷ್ಟೋ ಕವಿತೆಗಳಿಂದಲೇ/ಅವನೊಂದಿಗೆ ಸಖ್ಯ ಸಾಧಿಸಿಕೊಂಡೆ.”

-ಲಾವಣ್ಯ ಪ್ರಭ, ಮೈಸೂರು
—–