ಅನುದಿನ‌ ಕವನ-೧೩೭೦, ಕವಯಿತ್ರಿ: ಮಮತಾ ಅರಸೀಕೆರೆ, ಹಾಸನ‌‌ ಜಿ., ಕವನದ ಶೀರ್ಷಿಕೆ:ಆರಾಧನೆ

ಆರಾಧನೆ

ಯಾವುದೊ ಹಾಡೊಂದು ಗುಂಗಾಗಿದೆ
ಪ್ರೇಮವಾಗಿದೆಯೆಂದು ತಿಳಿಯಬೇಕು

ಯಾವುದೊ ದನಿಯೊಂದು ಸೆಳೆಯುತ್ತಿದೆ
ಅನುರಕ್ತಿಯಾಗಿಯೆಂದು ಅರಿಯಬೇಕು

ಯಾವುದೊ ಬಿಂಬವೊಂದು ಕಣ್ಣಲ್ಲೇ ಕುಳಿತಿದೆ
ವ್ಯಾಮೋಹವಾಗಿದೆಯೆಂದು ತಿಳಿಯಬೇಕು

ಯಾವುದೊ ಬಾಂಧವ್ಯವೊಂದು ಕಾಡುತ್ತಿದೆ
ಪ್ರಣಯವಾಗಿದೆಯೆಂದು ಅರಿಯಬೇಕು

ಯಾವುದೊ ದಾರಿಯೊಂದು ಸೆಳೆದಿದೆ
ಅನುರಾಗವಾಗಿದೆಯೆಂದು ತಿಳಿಯಬೇಕು.

ಯಾರದೋ ಚಿತ್ರವೊಂದು ಎದೆಯಲ್ಲಿ ಅಡಗಿದೆ
ಒಲವು ತೀವ್ರವಾಗಿದೆಯೆಂದು ಅರಿಯಬೇಕು

ಯಾರದೊ ಸ್ಪರ್ಶಕ್ಕೆ ಮನಸು ತಹತಹಿಸಿದೆ
ಒಲುಮೆ ಉಕ್ಕಿದೆಯೆಂದು ತಿಳಿಯಬೇಕು

ಅವನ ಸಾನಿಧ್ಯಕ್ಕೆ ಆತ್ಮ ಹಾತೊರೆದಿದೆ
ಮೆಚ್ಚುಗೆ ಅತಿಯಾಗಿದೆಯೆಂದು ಅರಿಯಬೇಕು

ಹೇಗೆ ತಲುಪಿಸಲಿ ನಿಯತಿ
ಈ ಆರಾಧನಾ ಆವರ್ತನೆ
ಅಂಗೀಕರಿಸುವನೇನೆ
ಅವ ಜ್ಞಾನ ದೀವಿಗೆಗಳ ತೆನೆ
ಸಾತತ್ಯದ ಬಂಧನಕ್ಕೆ
ಗಾಯಗಳು ಶೀಘ್ರ ಮಾಯಬೇಕು

-ಮಮತಾ ಅರಸೀಕೆರೆ
—–