ಬೆಂಗಳೂರು, ಅ.2: ಐದು, ಹತ್ತು, ಹದಿನೈದು, ಇಪ್ಪತ್ತು ವರ್ಷಗಳಿಂದ ರಾಜ್ಯದ ಸರಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಾನ್ ಯುಜಿಸಿ ಪದವಿ ಅತಿಥಿ ಉಪನ್ಯಾಸಕರು ಅ.3ರಂದು ರಾಜ್ಯದ ಎಲ್ಲಾ ಜಿಲ್ಲೆಗಳಿಂದ ರಾಜಧಾನಿಗೆ ಆಗಮಿಸಿ ತಮ್ಮ ಸೇವೆಯನ್ನು ಕಡ್ಡಾಯವಾಗಿ ಮುಂದುವರೆಸಲು ಒತ್ತಾಯಿಸಿ ಕಾಲೇಜು ಶಿಕ್ಷಣ ಇಲಾಖೆಯ ಸಚಿವರು ಆಯುಕ್ತರಿಗೆ ಮನವಿ ಸಲ್ಲಿಸಲಿದ್ದಾರೆ.
ಉಪನ್ಯಾಸಕರಾದ ಲೋಕೇಶ್ ಪಿ.ಸಿ, ಆರೀಫ್ ಕಾರ್ಲೆ, ಭರತ ಕುಮಾರ್, ವಿಜಯ ಕುಮಾರ್, ಶಿವಣ್ಣ, ರಾಜೇಶ್ ಗೌಡ,ರಮೇಶ್, ಶಂಬು ಸೇರಿದಂತೆ ಹಲವು ಮುಖಂಡರ ನೇತೃತ್ವದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಜಗದೀಶ್ ಜಿ ಮತ್ತಿತರ ಗಣ್ಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸುವರು.
ಸರಕಾರಿ ಪದವಿ ಕಾಲೇಜುಗಳಲ್ಲಿ ಕಳೆದ 20-15-10-8-5-4-2-1 ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ 5800ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರಿಗೆ ಉದ್ಯೋಗವಿಲ್ಲದಿದ್ದರೆ ಇವರ ಕುಟುಂಬಗಳು ಬೀದಿಪಾಲಾಗುತ್ತವೆ. ಸರಕಾರ ಮಾನವೀಯತೆ ದೃಷ್ಟಿಯಿಂದ ಇವರನ್ನು ಮುಂದುವರೆಸಬೇಕು. ಪಿಯುಸಿ ಉಪನ್ಯಾಸಕರಿಗೆ ನೀಡಿದಂತೆ ಅಗತ್ಯ ಶೈಕ್ಷಣಿಕ ಅರ್ಹತೆ ಪಡೆಯಲು ಕನಿಷ್ಟ ಐದು ವರ್ಷ ಅವಕಾಶ ನೀಡಬೇಕು. ಯುಜಿಸಿ ಶೈಕ್ಷಣಿಕ ಶಿಕ್ಷಣ ಅರ್ಹತೆ ಇರಬೇಕು ಎನ್ನುವ ಉಚ್ಚ ನ್ಯಾಯಾಲಯದ ಮಧ್ಯಂತರ ನಿರ್ದೇಶನಕ್ಕೆ ಮೇಲ್ಮನವಿ ಸಲ್ಲಿಸಬೇಕು ಎಂದು ಅತಿಥಿ ಉಪನ್ಯಾಸಕರು ಒತ್ತಾಯಿಸಿದ್ದಾರೆ.
—–