ಗಾಂಧಿ….
ಗಾಂಧಿ ಎಂದರೆ
ಹಿಮಾಲಯ
ಏರಿದಷ್ಟೂ ಎತ್ತರ
ಅದ ಏರ ಹೋಗಿ
ಜಾರಿ ಬಿದ್ದವರೆಷ್ಟೋ
ಏರಲಾಗದೆ
ಜರಿದವರೆಷ್ಟೋ..
ಏರಿ ಅರಿವಿನ ಬಿತ್ತರ
ತಿಳಿದವರೆಷ್ಟೋ..
ಗಾಂಧಿ ಎಂದರೆ
ಮಹಾಸಾಗರ
ಇಳಿದಷ್ಟೂ ಆಳ
ತಿಳಿದಷ್ಟೂ ಅಗಾಧ
ಇಳಿಯ ಹೋಗಿ
ಮುಳುಗಿದವರಷ್ಟೋ..
ಆಳಕ್ಕಿಳಿದು
ಮುತ್ತುಗಳ ಹೆಕ್ಕಿ
ತಂದವರೆಷ್ಟೋ..
ಗಾಂಧಿ ಎಂದರೆ
ನೀಲಾಕಾಶ
ಸರಹದ್ದುಗಳಿಲ್ಲದ
ಅನಂತ
ಕಣ್ಣ ಪೊರೆ ಕಳಚಿದರೆ
ಕೋರೈಸುವವು
ಗ್ರಹ ತಾರೆಗಳು
ಕಂಡು ಖುಷಿಯಾದವರೆಷ್ಟೋ
ಕಾಣದೆ ಕರುಬಿದವರೆಷ್ಟೋ
ಗಾಂಧಿ ಎಂದರೆ
ಅದು ಬರಿ ಹೆಸರೆ
ಸತ್ಯದ ಉಸಿರು
ಶಾಂತಿಯ ಬಸಿರು
ತ್ಯಾಗದ ಹಸಿರು
ಅಹಿಂಸೆಯ ಒಸರು.
ತಿಳಿಯಲು ಗಾಂಧಿಯನು
ನಾವು ತಿಳಿಯಾಗಬೇಕು .
-ಎ.ಎಂ.ಪಿ ವೀರೇಶಸ್ವಾಮಿ
ಹೊಳಗುಂದಿ.
ಸರ್ವ ಜನರ ಸ್ವಾತಂತ್ರ್ಯ, ಶಾಂತಿ ನೆಮ್ಮದಿಗಾಗಿ ತಮ್ಮ ಸಂಸಾರಿಕ ಬದುಕನ್ನೇ ತ್ಯಾಗ ಮಾಡಿ ದೇಶಕ್ಕಾಗಿಯೇ ಹಗಳಿರುಳು ದುಡಿಯುತ್ತಾ,, ಜನರ ಚಳುವಳಿಗಳನ್ನು ಹುಟ್ಟು ಹಾಕಿ ಅವುಗಳ ಮುಂದಾಳತ್ವವನ್ನು ವಹಿಸಿ, ತಮ್ಮ ಖಾಸಗಿ ಜೀವನವನ್ನು ಕಡೆಗಣಿಸಿ, ಹಿಂಸೆಯ ವಿರುದ್ಧ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡು ಶಾಂತಿ ಸೌಹಾರ್ಧಗಳನ್ನು ಕಾಪಾಡುತ್ತಾ, ದೇಶದ ಸ್ವಾತಂತ್ರ್ಯಕ್ಕಾಗಿ ಸೆರೆಮನೆ ನೆ ಶಿಕ್ಷೆಗಳನ್ನು ಅನುಭವಿಸುತ್ತಾ ಕಡೆಗೆ, ದೇಶಕ್ಕಾಗಿಯೇ ತಮ್ಮ ಪ್ರಾಣವನ್ನು ಅರ್ಪಿಸಿಕೊಂಡ ಅದೆಷ್ಟೋ ಆತ್ಮಗಳಲ್ಲಿ ಗಾಂಧಿಯವರ ಚೇತನವೂ ಒಂದಾಗಿದೆ.
ಆದರೆ, ದೇಶದಲ್ಲಿ ಬದಲಾದ ಇತ್ತೀಚಿನ
ರಾಜಕೀಯಾಡಳಿತದ ಸನ್ನಿವೇಶದಲ್ಲಿ ದೇಶಕ್ಕಾಗಿ ತಮ್ಮ ಸರ್ವಸ್ವವನ್ನೂ ಧಾರೆಯೆರೆದು ಬಲಿಯಾದ ಆ ಹಿರಿಯ ಚೇತನಗಳನ್ನು ಹೀಯಾಳಿಸುವ, ಗೇಲಿಮಾಡುವಂಥವರನ್ನು ಪ್ರೋತ್ಸಾಹಿಸುವ ದುಷ್ಟ ಪರಂಪರೆ ದೇಶದಲ್ಲಿ ಕಂಡುಬರುತ್ತಿರುವ ಸಂಧರ್ಭದಲ್ಲಿ ಗಾಂಧೀಯವರನ್ನು ಸ್ಮರಿಸಿಕೊಂಡು ಬರೆದಿರುವ ಈ ಕವನ ಬಹು ಅರ್ಥಗರ್ಭಿತವಾಗಿದೆ ಹಾಗೂ ಇಂದಿನ ತಲೆಮಾರಿನವರಿಗೆ ಗಾಂಧಿಯವರನ್ನು ಅರ್ಥಮಾಡಿಸುವಲ್ಲಿ ಖಂಡಿತ ಸಫಲವಾಗುವುದು.
ಧನ್ಯವಾದಗಳು.
ಮಂಜುನಾಥ್(ಪ್ಲವಂಗ)
ಬೆಂಗಳೂರು.