ಅನುದಿನ ಕವನ-೧೩೭೨, ಕವಯಿತ್ರಿ: ರೂಪಾ ಗುರುರಾಜ್, ಬೆಂಗಳೂರು, ಕವನದ ಶೀರ್ಷಿಕೆ: ಗುಂಗು

ಗುಂಗು

ಮೆಲ್ಲಗೆ ಕರಗಲಾರಂಭಿಸಿದ್ದೇನೆ ನಿನ್ನೊಳಗೆ ಬಣ್ಣವಾಗಿ
ದಿನವೂ ನಿನ್ನೊಡನಾಡುತ್ತಾ ನಿನ್ನಸ್ತಿತ್ವಕ್ಕೆ ಬೆರಗಾಗಿ

ಮಾತಿಗೂ ಮೀರಿದ ಭಾವಗಳು ಸುಳಿದಾಡುತ್ತವೆ ಕಂಗಳಲ್ಲಿ
ಸೋಲುವುದು ಮನ ನಿನಗೋ, ನಿನ್ನೊಳಗಿನ ಪ್ರೀತಿಗೋ ತಿಳಿಯದಿಲ್ಲಿ

ಅದೆಂಥದ್ದೋ ಗುಂಗಿನ ಸೆಳೆತದಲ್ಲಿ ಕಳೆದುಹೋದಂತೆ
ಸುಮ್ಮನೆ ನಿನ್ನನರಸುತ್ತದೆ ಮನ ನನಗೇ ಗೊತ್ತಿಲ್ಲದಂತೆ

ಹತ್ತಿರವಿದ್ದೂ ದೂರವಿದ್ದಂತೆ, ನನ್ನೊಳಗಿದ್ದೂ ಹೊರಗಿರುವಂತೆ ಒಮ್ಮೊಮ್ಮೆ ಗೋಜಲು
ಏಕಿಂಥಾ ಕನವರಿಕೆಗಳೋ ಮನಕೆ ಅದೇಕೆ ಹಾತೊರೆಯುವುದೋ ನಿನ್ನ ತಲುಪಲು?

ಹೃದಯ ಹಸಿಯಾಗಿದೆ ನಿನ್ನೊಲವ ಮಳೆ ಹನಿಗಳಲಿ ಮಿಂದು
ಟಿಸಿಲೊಡೆದಿದೆ ಅಲ್ಲೇ ಪುಟ್ಟ ಚಿಗುರು ಪ್ರೀತಿಯಲಿಂದು

ಕೈಚಾಚಿ ಕರೆದುಬಿಡು ಸುರಿದುಬಿಡುವೆ ನಿನ್ನಿಳೆಗೆ ಮಳೆಯಾಗಿ
ಜಗವ ಮರೆತು ಕುಳಿತುಬಿಡುವೆ ನಿನ್ನ ಅಂಗೈಯೊಳಗೆ ಮುತ್ತಾಗಿ

-ರೂಪ ಗುರುರಾಜ, ಬೆಂಗಳೂರು
—–